ಅಂದು ವಿದ್ಯಾರ್ಥಿ, ಇಂದು ಅದೇ ಮಠಕ್ಕೆ ಪೀಠಾಧಿಪತಿ: ಅಭಿನವ ಗವಿಸಿದ್ದೇಶ್ವರ ಶ್ರೀಗಳ ಜೀವನವೇ ರೋಚಕ
ಮೈಸೂರು ದಸರಾ ಉದ್ಘಾಟಿಸಲಿರುವ ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಶ್ರೀಗಳ ಜೀವನ ರೋಚಕವಾದ್ದದ್ದು. ಕಲಬುರ್ಗಿಯ ಬಡ ಕುಟುಂಬದಲ್ಲಿ ಪರ್ವತಯ್ಯನಾಗಿ ಜನಿಸಿದ ಇವರು, ಮುಂಡರಗಿಗೆ ಹೋಗುವ ದಾರಿಯಲ್ಲಿ ಕೊಪ್ಪಳ ಗವಿಮಠ ಸೇರಿದರು. 13ನೇ ವಯಸ್ಸಿನಲ್ಲಿ ಮಠ ಪ್ರವೇಶಿಸಿದ ಪರ್ವತಯ್ಯ ಶಿಕ್ಷಣ, ಸೇವೆ ಮತ್ತು ಆಧ್ಯಾತ್ಮಿಕ ಬದುಕಿನ ಮೂಲಕ 18ನೇ ಪೀಠಾಧಿಪತಿಗಳಾದರು. ಈಗ ಇವರು ದಸರಾ ಉದ್ಘಾಟಿಸಲಿರುವುದು ರಾಜ್ಯಕ್ಕೆ ಹೆಮ್ಮೆ.
ಕೊಪ್ಪಳ, ಅಕ್ಟೋಬರ್ 07: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ದಸರಾವನ್ನು ಉದ್ಘಾಟಿಸಲಿದ್ದಾರೆ. ಶ್ರೀಗಳ ಜೀವನ ಅತ್ಯಂತ ರೋಚಕವಾಗಿದ್ದು, ಬಡತನದಿಂದ ಬಂದ ಒಬ್ಬ ಸಾಮಾನ್ಯ ವ್ಯಕ್ತಿ ಆಧ್ಯಾತ್ಮಿಕ ಲೋಕದಲ್ಲಿ ಉನ್ನತ ಸ್ಥಾನಕ್ಕೇರಿ, ಈಗ ನಾಡಿನ ಪ್ರಮುಖ ಹಬ್ಬವೊಂದನ್ನು ಉದ್ಘಾಟಿಸುವ ಗೌರವಕ್ಕೆ ಪಾತ್ರರಾಗಿದ್ದಾರೆ. ಕಲಬುರ್ಗಿ ಜಿಲ್ಲೆಯ ಹಾಗರಗುಂಡಿಗೆ ಗ್ರಾಮದ ನೀಲಯ್ಯ ಹಿರೇಮಠ ಮತ್ತು ಈರಮ್ಮ ದಂಪತಿ ಪುತ್ರರಾದ ಪರ್ವತಯ್ಯ (ಶ್ರೀಗಳ ಪೂರ್ವಾಶ್ರಮದ ಹೆಸರು), ಬಾಲ್ಯದಲ್ಲಿ ಕಡುಬಡತನ ಕಂಡವರು. 13ನೇ ವಯಸ್ಸಿನಲ್ಲಿ ಮುಂಡರಗಿಗೆ ತೆರಳಬೇಕಾಗಿದ್ದ ಪರ್ವತಯ್ಯ ಕೊಪ್ಪಳದಲ್ಲಿ ಬಸ್ ತಪ್ಪಿ ಗವಿಮಠದಲ್ಲಿ ಆಶ್ರಯ ಪಡೆದರು. ಬಳಿಕ ಅದೇ ಮಠದಲ್ಲಿ ಉಳಿದು, 17ನೇ ಪೀಠಾಧಿಪತಿ ಶಿವಶಾಂತವೀರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಶಿಕ್ಷಣ ಮತ್ತು ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದರು. ಅವರ ಆಚಾರ, ವಿಚಾರ ಮತ್ತು ಸೇವಾ ಮನೋಭಾವವನ್ನು ಮೆಚ್ಚಿದ ಶಿವಶಾಂತವೀರ ಸ್ವಾಮಿಗಳು, 1998ರಲ್ಲಿ ಪರ್ವತಯ್ಯ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಘೋಷಿಸಿದರು. 2002ರ ಡಿಸೆಂಬರ್ 13ರಂದು ಅಭಿನವ ಗವಿಸಿದ್ದೇಶ್ವರ ಶ್ರೀಗಳಾಗಿ ಪಟ್ಟಾಭಿಷಿಕ್ತರಾದ ಅವರು, ಕೊಪ್ಪಳ ಗವಿಮಠದ 18ನೇ ಪೀಠಾಧಿಪತಿಯಾದರು. ಅಂದಿನಿಂದ, ಶಿಕ್ಷಣ ಮತ್ತು ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡುತ್ತಾ, ಗವಿಮಠದ ಜಾತ್ರೆಯನ್ನು ದಕ್ಷಿಣ ಭಾರತದ ಕುಂಭಮೇಳ ಎಂದು ಕರೆಯುವ ಮಟ್ಟಿಗೆ ಬೆಳೆಸಿದ್ದಾರೆ. ಇಂತಹ ಶ್ರೀಗಳು ಮೈಸೂರು ದಸರಾ ಉದ್ಘಾಟಿಸಲಿರುವುದು ಕೇವಲ ಕೊಪ್ಪಳಕ್ಕಷ್ಟೇ ಅಲ್ಲದೆ, ಇಡೀ ನಾಡಿಗೆ ಹೆಮ್ಮೆಯ ವಿಷಯ ಎಂದು ಮಠದ ಭಕ್ತರು ಸಂತಸ ಪಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
