ಗದಗ: ತಲ್ವಾರ್, ಚಾಕುವಿನಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ಭಯಾನಕ ಘಟನೆಯ ವಿಡಿಯೋ ವೈರಲ್

Updated By: Ganapathi Sharma

Updated on: Nov 27, 2025 | 6:46 AM

ಸಿನಿಮೀಯ ರೀತಿಯ ತಲ್ವಾರ್ ದಾಳಿಗೆ ಗದಗ-ಬೆಟಗೇರಿ ಅವಳಿ ನಗರದ ಜನರು ಬೆಚ್ಚಿಬಿದ್ದಿದ್ದಾರೆ. ಅಷ್ಟೇ ಅಲ್ಲ, ಘಟನೆಯ ವಿಡಿಯೋ ಮೊಬೈಲ್ ಫೋನ್​ನಲ್ಲಿ ರೆಕಾರ್ಡ್ ಆಗಿದ್ದು, ಸದ್ಯ ವೈರಲ್ ಆಗುತ್ತಿದೆ. ಯುವಕನೊಬ್ಬನನ್ನು ಹತ್ತಾರು ಜನರ ಸಮ್ಮುಖದಲ್ಲೇ ಯುವಕರ ಗುಂಪು ತಲ್ವಾರ್, ಬಿಯರ್ ಬಾಟಲ್, ಚಾಕುವಿನಿಂದ ಇರಿದು ಹಲ್ಲೆ ಮಾಡಿದೆ. ಭಯಾನಕ ಘಟನೆಗೆ ಜನ ಆಘಾತಕ್ಕೊಳಗಾಗಿದ್ದಾರೆ.

ಗದಗ, ನವೆಂಬರ್ 27: ತಲ್ವಾರ್, ಬಿಯರ್ ಬಾಟಲ್, ಚಾಕುವಿನಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಗದಗ ನಗರದ ಮುಳಗುಂದ ನಾಕಾ ಬಳಿಯ ದುರ್ಗಾ ಬಾರ್ ಬಳಿ ನಡೆದಿದೆ. ಸಿನಿಮೀಯ ರೀತಿಯಲ್ಲಿ ಮೂವರು ಪುಡಿ ರೌಡಿಗಳು ಯುವಕನ ಮೇಲೆ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಘಟನೆಯ ಭಯಾನಕ ದೃಶ್ಯವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಹತ್ತಾರು ಜನರ ಎದುರಲ್ಲೇ ತಲ್ವಾರ್, ಚಾಕು, ಬೀಯರ್ ಬಾಟಲನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಹಳೇ ದ್ವೇಷದ ಹಿನ್ನಲೆಯಲ್ಲಿ ಮೂವರಿಂದ ನಡುರಸ್ತೆಯಲ್ಲಿ ಮನಸ್ಸೋ ಇಚ್ಛೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ. ಯುವಕನ ಕತ್ತು, ಮುಖ, ತಲೆ, ಹೊಟ್ಟೆ, ಎದೆ, ಕೈ ಸೇರಿ ದೇಹದ ಹಲವು ಭಾಗಕ್ಕೆ ಚಾಕು ಇರಿಯಲಾಗಿದೆ. ಅರುಣಕುಮಾರ್ ಕೋಟೆಗಲ್ಲ ಎಂಬಾತ ಹಲ್ಲೆಗೊಳಗಾದ ಯುವಕ. ಸದ್ಯ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ ಅರುಣಕುಮಾರ್​ನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ.

ಅಭಿಷೇಕ್, ಸಾಯಿಲ್ ಹಾಗೂ ಮುಷ್ತಾಕ್ ಎಂಬ ಯುವಕರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅರುಣಕುಮಾರ್ ಹೋಟೆಲ್​ವೊಂದರಲ್ಲಿ ಊಟಕ್ಕೆ ಕುಳಿತಿದ್ದ. ಏಕಾಏಕಿ ಹೊಟೆಲ್​ಗೆ ನುಗ್ಗಿದ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಗದಗ ಡಿವೈಎಸ್ಪಿ ಮುರ್ತುಜ್ ಖಾದ್ರಿ, ಸಿಪಿಐ ಜೂಲಕಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ