ಗರುಡ ಪುರಾಣದ ಪ್ರಕಾರ ಊಟ ಎಲ್ಲಿ ಮಾಡಬೇಕು, ಎಲ್ಲಿ ಮಾಡಬಾರದು? ಫಲಗಳೇನು? ಇಲ್ಲಿದೆ ವಿವರ

Updated on: Jun 16, 2026 | 6:20 AM

ಗರುಡ ಪುರಾಣದ ಪ್ರಕಾರ, ನಾವು ಎಲ್ಲಿ ಊಟ ಮಾಡುತ್ತೇವೆ ಎಂಬುದು ನಮ್ಮ ಮೇಲೆ ಪರಿಣಾಮ ಬೀರುತ್ತದೆ. ದುಷ್ಟರು, ದುರಹಂಕಾರಿಗಳು, ಅಕ್ರಮ ಸಂಪಾದಕರು ಮತ್ತು ಇತರರನ್ನು ಹಿಂಸಿಸುವವರ ಮನೆಯಲ್ಲಿ ಊಟ ಮಾಡಬಾರದು. ಇದು ವಂಶಕ್ಕೆ ತೊಂದರೆ ತರಬಹುದು. ಶ್ರಮಜೀವಿಗಳ ಮನೆಯಲ್ಲಿ ಮಾಡುವ ಊಟ ಭಗವಂತನ ಕೃಪೆಯನ್ನು ತರುತ್ತದೆ ಎಂದು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

ನಮ್ಮ ದೈನಂದಿನ ಜೀವನದಲ್ಲಿ ಊಟವು ಕೇವಲ ದೇಹದ ಪೋಷಣೆಯಲ್ಲದೆ, ಒಂದು ಯಜ್ಞವೂ ಆಗಿದೆ. ಗರುಡ ಪುರಾಣವು ಊಟದ ಮಹತ್ವ ಮತ್ತು ಎಲ್ಲಿ ಊಟ ಮಾಡಬೇಕು, ಎಲ್ಲಿ ಮಾಡಬಾರದು ಎಂಬುದರ ಕುರಿತು ಮಹತ್ವದ ವಿಚಾರಗಳನ್ನು ತಿಳಿಸುತ್ತದೆ ಎಂದಿದ್ದಾರೆ ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ. ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಆ ಬಗ್ಗೆ ವಿವರಣೆ ನೀಡಿರುವ ಅವರು, ಸಾಮಾನ್ಯವಾಗಿ ದೇವಾಲಯಗಳಲ್ಲಿ ಊಟ ಮಾಡಿದಾಗ ಅದನ್ನು ಪ್ರಸಾದ ಎಂದು ಭಾವಿಸಿ ಭಗವಂತನ ಕೃಪೆ ಲಭಿಸುತ್ತದೆ ಎಂದು ನಂಬಲಾಗುತ್ತದೆ. ಆದರೆ, ಗರುಡ ಪುರಾಣದ ಪ್ರಕಾರ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಊಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದಿದ್ದಾರೆ.

ದುಷ್ಟರು, ಅನ್ಯಾಯದಿಂದ ಹಣ ಗಳಿಸಿದವರು, ವಿಪರೀತ ಬಡ್ಡಿ ವಸೂಲಿ ಮಾಡುವವರು, ದುರಹಂಕಾರಿಗಳು, ಹಾಗೆಯೇ ಹೆಂಡತಿ, ಮಕ್ಕಳನ್ನು, ವೃದ್ಧರನ್ನು ಅಥವಾ ಪಶುಪಕ್ಷಿಗಳನ್ನು ಹಿಂಸಿಸುವವರ ಮನೆಯಲ್ಲಿ ಊಟ ಮಾಡಬಾರದು. ಇಂತಹ ಸ್ಥಳಗಳಲ್ಲಿ ಸೇವಿಸಿದ ಆಹಾರವು ನಮ್ಮ ವಂಶಕ್ಕೆ ತೊಂದರೆಯನ್ನು ತರಬಹುದು ಎಂದು ಶಾಸ್ತ್ರಗಳು ಹೇಳುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಪ್ರಾಮಾಣಿಕವಾಗಿ ದುಡಿದು ಊಟ ಮಾಡುವ ಶ್ರಮಜೀವಿಗಳ ಮನೆಯಲ್ಲಿ ಒಂದು ತುತ್ತು ಅನ್ನ ಸೇವಿಸುವುದು ಪುಣ್ಯಕರ. ಅಲ್ಲಿ ಭಗವಂತನ ಆವಾಸವಿರುತ್ತದೆ ಮತ್ತು ನಮಗೆ ಒಳ್ಳೆಯದಾಗುತ್ತದೆ. ನಮ್ಮ ಪಂಚಭೂತಗಳು ಮತ್ತು ಸಪ್ತಚಕ್ರಗಳು ಆಹಾರವನ್ನು ಸ್ವೀಕರಿಸಲು, ಆ ಆಹಾರವು ಶುದ್ಧವಾಗಿರಬೇಕು. ಊಟ ಮಾಡುವಾಗ ಅದನ್ನು ಭಗವಂತನಿಗೆ ಅರ್ಪಿಸಿ ಸ್ವೀಕರಿಸಬೇಕು. ಈ ನಿಯಮಗಳು ನಂಬಿಕೆಯ ಆಧಾರದ ಮೇಲೆ ನಮ್ಮ ಜೀವನಕ್ಕೆ ಸಕಾರಾತ್ಮಕ ಶಕ್ತಿಯನ್ನು ತರಲು ಸಹಕಾರಿ ಎಂದು ಅವರು ಹೇಳಿದ್ದಾರೆ.

Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More