ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಪಾರ್ಥಸಾರಥಿ ಸುವರ್ಣ ರಥದ ವಿಶೇಷ ಏನು? ಹೇಗಿದೆ ನೋಡಿ
ಉಡುಪಿ ಕೃಷ್ಣನಿಗೆ ಚೆಂದದ ಚಿನ್ನದ ರಥ ಸಮರ್ಪಣೆ ಯಾಗುತ್ತಿದೆ. ಪರ್ಯಾಯ ಪುತ್ತಿಗೆ ಶ್ರೀಗಳು ತಮ್ಮ ಸನ್ಯಾಸ ಜೀವನದ 50 ವರ್ಷ ಪೂರ್ಣಗೊಂಡ ಕಾರಣಕ್ಕೆ ಇಷ್ಟದೇವರಾದ ಕಡಗೋಲು ಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ ಅರ್ಪಿಸುತ್ತಿದ್ದಾರೆ. ಈ ರಥ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ವಿಡಿಯೋ ಸಹಿತ ಮಾಹಿತಿ ಇಲ್ಲಿದೆ.
ಉಡುಪಿ, ಡಿಸೆಂಬರ್ 26: ಉಡುಪಿಯ ಕಡೆಗೋಲು ಕೃಷ್ಣ ದೇವರನ್ನು ‘ಅನ್ನ ಬ್ರಹ್ಮ’ ಎಂದೂ ಕರೆಯುತ್ತಾರೆ. ಅದೇ ರೀತಿ ‘ಉತ್ಸವ ಬ್ರಹ್ಮ’ ಎಂದೂ ಬಣ್ಣಿಸಲಾಗುತ್ತದೆ. ಪ್ರತಿದಿನ ಕೃಷ್ಣ ದೇವರಿಗೆ ಉತ್ಸವ ನಡೆಯುತ್ತದೆ. ಇನ್ನು ಮುಂದೆ ಕೃಷ್ಣದೇವರ ಉತ್ಸವಕ್ಕೆ ಹೊಸ ಮೆರಗು ಸಿಗಲಿದೆ. ಪರ್ಯಾಯ ಪುತ್ತಿಗೆ ಮಠಾಧೀಶರು ಇದೀಗ ಪಾರ್ಥಸಾರಥಿ ಸುವರ್ಣ ರಥವನ್ನು ಕೃಷ್ಣನಿಗೆ ಅರ್ಪಿಸಲಿದ್ದಾರೆ. ಸನ್ಯಾಸಿಯಾಗಿ 50 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ, ಸುಂದರ ರಥವನ್ನು ನಿರ್ಮಿಸಿ ಕೃಷ್ಣದೇವರಿಗೆ ಅರ್ಪಿಸುತ್ತಿದ್ದಾರೆ. ಉಡುಪಿ ಕೃಷ್ಣ ಮಠದ ಪೂಜಾ ಪರಂಪರೆಯಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಮಳೆಗಾಲದ ಕೆಲವು ದಿನಗಳನ್ನು ಹೊರತುಪಡಿಸಿ ಪ್ರತಿದಿನವೂ ಉಡುಪಿ ಕೃಷ್ಣನಿಗೆ ರಥೋತ್ಸವ ನಡೆಸಲಾಗುತ್ತದೆ. ಈಗಾಗಲೇ ಏಳು ರಥಗಳು ಕೃಷ್ಣನ ಸೇವೆಗೆ ಬಳಕೆಯಾಗುತ್ತಿದ್ದು, ಇದು ಎಂಟನೇ ರಥವಾಗಿದೆ.
ವಿಶ್ವಗೀತಾ ಪರ್ಯಾಯ ವಿಶೇಷ ಈ ಚಿನ್ನದ ರಥ!
ಅಷ್ಟಮಠಗಳು ಅಷ್ಟ ರಥಗಳು ಕೃಷ್ಣ ಸೇವೆಗೆ ಸದಾ ಕಾಲ ಸನ್ನದ್ಧವಾಗಿದೆ. ಪರ್ಯಾಯ ಪುತ್ತಿಗೆ ಶ್ರೀಗಳು ಕೋಟಿಗೀತಾ ಲೇಖನ ಯಜ್ಞದ ಮೂಲಕ ತಮ್ಮ ಪರ್ಯಾಯವನ್ನು ವಿಶ್ವಗೀತಾ ಪರ್ಯಾಯ ಎಂದೆ ಹೇಳಿಕೊಂಡು ಬಂದಿದ್ದಾರೆ. ಅವರ ಈ ಚಿಂತನೆಗೆ ಪೂರಕವಾಗಿ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಭಗವದ್ಗೀತೆ ಪಠಿಸಿ ವಿಶ್ವವೇ ಉಡುಪಿ ಎತ್ತ ತಿರುಗಿ ನೋಡುವಂತೆ ಮಾಡಿದ್ದರು. ಇದೀಗ ಗೀತಾ ಪರ್ಯಾಯ ಭಗವದ್ಗೀತೆಯ ಸಂದೇಶ ಸಾರುವ ರಥದೊಂದಿಗೆ ಸಮಾಪನಗೊಳ್ಳಲಿದೆ.
ಮಠದ ಹೊರ ಭಾಗದ ರಥಬೀದಿಯಲ್ಲಿ ಎಳೆಯುವುದಕ್ಕೆ ಬದಲಾಗಿ ಕೃಷ್ಣಮಠದ ಗರ್ಭಗುಡಿಯ ಸುತ್ತಲೂ ಇರುವ ಪೌಳಿಯಲ್ಲಿ ಎಳೆಯಲಾಗುತ್ತದೆ. ಭಕ್ತರಿಗೆ ಹರಕೆ ಸಲ್ಲಿಸಲು ಈ ಮೂಲಕ ಹೊಸ ಅವಕಾಶ ದೊರಕಿದಂತಾಗಿದೆ.