CPL 2025: ಒಂದು ಎಸೆತದಲ್ಲಿ 20 ರನ್ ಚಚ್ಚಿದ ಆರ್​ಸಿಬಿ ಆಟಗಾರ; ವಿಡಿಯೋ ನೋಡಿ

Updated on: Aug 27, 2025 | 6:59 PM

Romario Shepherd: ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್,ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸೇಂಟ್ ಲೂಸಿಯಾ ಕಿಂಗ್ಸ್ ವಿರುದ್ಧ ಕೇವಲ 34 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿದರು. ಒಂದು ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್‌ಗಳನ್ನು ಬಾರಿಸಿ 33 ರನ್ ಗಳಿಸಿದ್ದು ವಿಶೇಷ. ಆದರೆ ಅವರ ಪ್ರಯತ್ನ ವ್ಯರ್ಥವಾಯಿತು, ಗಯಾನಾ ಪಂದ್ಯವನ್ನು ಸೋತಿತು.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಸ್ಫೋಟಕ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಪ್ರಸ್ತುತ ನಡೆಹಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ ಪರ ಆಡುತ್ತಿದ್ದಾರೆ. ಈ ಟೂರ್ನಿಯ 13 ನೇ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಶೆಫರ್ಡ್ ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ವಿರುದ್ಧ ಕೇವಲ 34 ಎಸೆತಗಳಲ್ಲಿ 5 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಾಯದಿಂದ ಅಜೇಯ 73 ರನ್ ಗಳಿಸಿದರು. ಅದರಲ್ಲೂ 15ನೇ ಓವರ್‌ನಲ್ಲಿ ಸಿಕ್ಸರ್​ಗಳ ಮಳೆಗರೆದ ಶೆಫರ್ಡ್, ವೇಗಿ ಓಶೇನ್ ಥಾಮಸ್ ಎಸೆದ ಒಂದು ಎಸೆತದಲ್ಲಿ 20 ರನ್ ಕಲೆಹಾಕಿದರು.

ಹ್ಯಾಟ್ರಿಕ್ ಸಿಕ್ಸರ್‌

ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ವೇಗಿ ಓಶೇನ್ ಥಾಮಸ್ ಎಸೆದ 15ನೇ ಓವರ್‌ನ ಮೂರನೇ ಎಸೆತ ನೋ ಬಾಲ್ ಆಯಿತು. ಈ ರೀತಿಯಾಗಿ ಉಚಿತವಾಗಿ 1 ರನ್ ಸಿಕ್ಕಿತು. ಮುಂದಿನ ಎಸೆತ ವೈಡ್ ಬಾಲ್ ಆಯಿತು, ಇದು ಫ್ರೀ ಹಿಟ್ ಅವಕಾಶವನ್ನು ಉಳಿಸಿತು. ಮುಂದಿನ ಎಸೆತದಲ್ಲಿ ಶೆಫರ್ಡ್, ಡೀಪ್ ಮಿಡ್-ವಿಕೆಟ್‌ನಲ್ಲಿ ಸಿಕ್ಸರ್ ಬಾರಿಸಿದರು. ಥಾಮಸ್ ಮತ್ತೆ ಓವರ್‌ಸ್ಟೆಪ್ ಮಾಡಿದರು.

ಅಂದರೆ ಶೆಫರ್ಡ್​ಗೆ ಮತ್ತೊಂದು ಫ್ರಿ ಹಿಟ್ ಅವಕಾಶ ಸಿಕ್ಕಿತು. ಈ ಎಸೆತವನ್ನು ಸಹ ಶೆಫರ್ಡ್​ ಸಿಕ್ಸರ್​ಗಟ್ಟಿದರು. ಹೀಗಾಗಿ ಎರಡು ಫ್ರಿ ಹಿಟ್ ಎಸೆತಗಳನ್ನು ಶೆಫರ್ಡ್​ ಸಿಕ್ಸರ್​ಗಟ್ಟಿದರು. ಇದಲ್ಲದೆ ಮುಂದಿನ ಎಸೆತವನ್ನು ಸಹ ಶೆಫರ್ಡ್​ ಸಿಕ್ಸರ್ ಬಾರಿಸುವಲ್ಲಿ ಯಶಸ್ವಿಯಾದರು. ಈ ಓವರ್‌ನಲ್ಲಿ ಥಾಮಸ್ ಒಟ್ಟು 33 ರನ್‌ಗಳನ್ನು ನೀಡಿದರು.

ಶೆಫರ್ಡ್ ಹೋರಾಟ ವ್ಯರ್ಥ

ಶೆಫರ್ಡ್ ಅವರ ಅಮೋಘ ಇನ್ನಿಂಗ್ಸ್‌ ಆಧಾರದ ಮೇಲೆ ಗಯಾನಾ ಅಮೆಜಾನ್ ವಾರಿಯರ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 202 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಸೇಂಟ್ ಲೂಸಿಯಾ ಕಿಂಗ್ಸ್ ಇನ್ನು 11 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳನ್ನು ಕಳೆದುಕೊಂಡು ಗುರಿಯನ್ನು ಬೆನ್ನಟ್ಟಿತು. ತಂಡದ ಪರ ಅಕೀಮ್ ಅಗಸ್ಟೆ 35 ಎಸೆತಗಳಲ್ಲಿ 73 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿದರು. ಅವರನ್ನು ಹೊರತುಪಡಿಸಿ, ಟಿಮ್ ಸೀಫರ್ಟ್ 24 ಎಸೆತಗಳಲ್ಲಿ 37 ರನ್ ಮತ್ತು ಟಿಮ್ ಡೇವಿಡ್ 15 ಎಸೆತಗಳಲ್ಲಿ 25 ರನ್ ಗಳಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 27, 2025 06:56 PM