WPL 2026: ಅವಮಾನಿಸಿದ ಕೋಚ್; ಬೌಂಡರಿಗಳಿಂದಲೇ 48 ರನ್ ಚಚ್ಚಿದ ಹರ್ಲೀನ್! ವಿಡಿಯೋ
Harleen Deol's Fiery Reply: ಹರ್ಲೀನ್ ಡಿಯೋಲ್ ಅವರ ಅಜೇಯ 64 ರನ್‌ಗಳ ನೆರವಿನಿಂದ, ಯುಪಿ ವಾರಿಯರ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿ, WPL 2026 ರಲ್ಲಿ ಮೊದಲ ಅಂಕ ಗಳಿಸಿತು. ಹಿಂದಿನ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್‌ಗಾಗಿ ಕೋಚ್‌ನಿಂದ ಅವಮಾನಕ್ಕೊಳಗಾಗಿದ್ದ ಹರ್ಲೀನ್, ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಪ್ರತ್ಯುತ್ತರ ನೀಡಿದರು. ಅವರ ಆಕ್ರಮಣಕಾರಿ ಆಟ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.
ಹರ್ಲೀನ್ ಡಿಯೋಲ್ ಅವರ ಅಜೇಯ ಅರ್ಧಶತಕದ ನೆರವಿನಿಂದ, ಯುಪಿ ವಾರಿಯರ್ಸ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ, 2026 ರ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಮೊದಲ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 161 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಯುಪಿ 18.1 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಜಯದ ನಗೆಬೀರಿತು. ಯುಪಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಹರ್ಲೀನ್ 39 ಎಸೆತಗಳಲ್ಲಿ 12 ಬೌಂಡರಿಗಳ ಸಹಾಯದಿಂದ ಅಜೇಯ 64 ರನ್ ಗಳಿಸಿದರು.
ಅಚ್ಚರಿಯ ಸಂಗತಿಯೆಂದರೆ ಇದೇ ಹರ್ಲೀನ್ ಡಿಯೋಲ್ ಕಳೆದ ಪಂದ್ಯದಲ್ಲಿ ಮುಖ್ಯ ಕೋಚ್ ಅಭಿಷೇಕ್ ಶರ್ಮಾರಿಂದ ಅವಮಾನಕ್ಕೊಳಗಾಗಿದ್ದರು. ಆದರೆ ಇಂದಿನ ಪಂದ್ಯದಲ್ಲಿ ತಾನು ಏನು ಎಂಬುದನ್ನು ಸಾಭೀತುಪಡಿಸಿದ ಹರ್ಲೀನ್ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಕೋಚ್ಗೆ ಉತ್ತರ ನೀಡಿದರು.
ವಾಸ್ತವವಾಗಿ ಡಬ್ಲ್ಯುಪಿಎಲ್ 7ನೇ ಪಂದ್ಯದಲ್ಲಿ ಯುಪಿ ತಂಡ ಡೆಲ್ಲಿ ತಂಡವನ್ನು ಎದುರಿಸಿತ್ತು. ಜನವರಿ 14 ರಂದು ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಯುಪಿ ಪರ ಹರ್ಲೀನ್ 36 ಎಸೆತಗಳಲ್ಲಿ 47 ರನ್ ಬಾರಿಸಿದ್ದರು. ಆದರೆ ತಂಡದ ಮುಖ್ಯ ಕೋಚ್ ಅಭಿಷೇಕ್ ಶರ್ಮಾ, ಹರ್ಲೀನ್ ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಿದ್ದಾರೆಂದು ಅವರನ್ನು ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಡಗೌಟ್ಗೆ ವಾಪಸ್ ಕರೆಸಿಕೊಂಡಿದ್ದರು. ಇದರಿಂದ ಹರ್ಲೀನ್ ಬಹಿರಂಗವಾಗಿಯೇ ಮುಜುಗರಕ್ಕೊಳಗಾಗಿದ್ದರು.
ಆದರೆ ಇಂದಿನ ಪಂದ್ಯದಲ್ಲಿ ಕೋಚ್ಗೆ ಸರಿಯಾದ ಪ್ರತ್ಯುತ್ತರ ನೀಡಿದ ಹರ್ಲೀನ್, ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದರು. ಮುಂಬೈ ತಂಡದ ಪ್ರತಿಯೊಬ್ಬ ಬೌಲರ್ಗೂ ಬೌಂಡರಿ ರುಚಿ ತೋರಿಸಿದ ಹರ್ಲೀನ್ ತಮ್ಮ ಇನ್ನಿಂಗ್ಸ್ನಲ್ಲಿ 12 ಬೌಂಡರಿಗಳನ್ನು ಬಾರಿಸಿದರು. ಅಂದರೆ ಕೇವಲ ಬೌಂಡರಿಗಳಿಂದಲೇ ಹರ್ಲೀನ್ 48 ರನ್ ಕಲೆಹಾಕಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ