ಹಾಸನ ದುರಂತ: ಸಚಿವ ಕೃಷ್ಣಬೈರೇಗೌಡರನ್ನು ತರಾಟೆಗೆ ತೆಗೆದುಕೊಂಡ ಜನ, ಸಿಎಂ ಯಾಕೆ ಬರ್ಲಿಲ್ಲವೆಂದು ಪ್ರಶ್ನೆ
ಹಾಸನದ ಟ್ರಕ್ ದುರಂತದ ಸ್ಥಳಕ್ಕೆ ಸಚಿವ ಕೃಷ್ಣ ಬೈರೇಗೌಡರು ಭೇಟಿ ನೀಡಿದರು. ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿದ ಅವರು, ಹೆಚ್ಚಿನ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು. ಆದರೆ, ಪರಿಹಾರದ ಮೊತ್ತ ಕಡಿಮೆ ಎಂದು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹಾಸನ, ಸೆಪ್ಟೆಂಬರ್ 13: ಗಣೇಶೋತ್ಸವ ಮೆರವಣಿಗೆ ವೇಳೆ ಭೀಕರ ದುರಂತ ಸಂಭವಿಸಿದ ಹಾಸನದ ಮೊಸಳೆ ಹೊಸಳ್ಳಿಗೆ ಸಚಿವ ಕೃಷ್ಣಬೈರೇಗೌಡ ಶನಿವಾರ ಭೇಟಿ ನೀಡಿ ಸ್ಥಳೀಯರು ಹಾಗೂ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು. ಇದೇ ವೇಳೆ, ದುರಂತ ಸಂಭವಿಸಿದ ಸ್ಥಳದಲ್ಲಿ ಜನರು ಪರಿಹಾರ ಕಡಿಮೆ ಎಂಬ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದಿಂದ ಘೋಷಿಸಲಾಗಿರುವ ಐದು ಲಕ್ಷ ರೂಪಾಯಿ ಪರಿಹಾರ ಸಾಕಾಗುವುದಿಲ್ಲ ಎಂದು ಜನ ಹೇಳಿದ್ದು, ಹೆಚ್ಚಿನ ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದರು. ಈ ದುರಂತದ ಸ್ಥಳಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ವೀಕ್ಷಿಸಬೇಕೆಂಬುದು ಜನರ ಆಗ್ರಹವಾಗಿತ್ತು. ಜನರನ್ನು ಸಮಾಧಾನಪಡಿಸಿದ ಸಚಿವರು, ಹೆಚ್ಚಿನ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.
