IND vs AUS: ಆರ್​ಸಿಬಿ ವೇಗಿಯ ಬೌಲಿಂಗ್ ಬಲೆಯಲ್ಲಿ ಶ್ರೇಯಸ್ ಅಯ್ಯರ್ ವಿಲವಿಲ

Updated on: Oct 19, 2025 | 4:35 PM

Hazlewood Dominates India ODI: ಜೋಶ್ ಹೇಜಲ್‌ವುಡ್ ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. 7 ಓವರ್‌ಗಳಲ್ಲಿ ಕೇವಲ 20 ರನ್ ನೀಡಿ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಅವರ ಪ್ರಮುಖ 2 ವಿಕೆಟ್‌ಗಳನ್ನು ಕಬಳಿಸಿದರು. ಅಯ್ಯರ್ ಅವರನ್ನು 13 ಇನ್ನಿಂಗ್ಸ್‌ಗಳಲ್ಲಿ 7ನೇ ಬಾರಿಗೆ ಔಟ್ ಮಾಡುವ ಮೂಲಕ ತಮ್ಮ ಪ್ರಾಬಲ್ಯ ಮೆರೆದರು. ಅವರ 35 ಡಾಟ್ ಬಾಲ್‌ಗಳು ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡಿದವು.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್​ವುಡ್, ಇದೀಗ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಕಾಡಿದ್ದಾರೆ. ಈ ಪಂದ್ಯದಲ್ಲಿ 7 ಓವರ್‌ಗಳನ್ನು ಬೌಲ್ ಮಾಡಿದ ಹೇಜಲ್‌ವುಡ್ ಕೇವಲ 20 ರನ್ ಬಿಟ್ಟುಕೊಟ್ಟು ಪ್ರಮುಖ 2 ವಿಕೆಟ್‌ಗಳನ್ನು ಕಬಳಿಸಿದರು. ಹೇಜಲ್‌ವುಡ್​ಗೆ ಬಲಿಯಾದವರಲ್ಲಿ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಸೇರಿದ್ದರು.

ವಾಸ್ತವವಾಗಿ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣದಿಂದಾಗಿ ಪಂದ್ಯವನ್ನು ಹಲವು ಬಾರಿ ನಿಲ್ಲಿಸಬೇಕಾಯಿತು. ಅದರಂತೆ ಪಂದ್ಯ 2ನೇ ಬಾರಿ ನಿಂತು ಆರಂಭವಾದ ಬಳಿಕ ಶ್ರೇಯಸ್ ಅಯ್ಯರ್ ತಮ್ಮ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರು. ಆದರೆ ಆ ಓವರ್ ನಂತರ ಬೌಲಿಂಗ್​ಗೆ ಬಂದ ಆಸ್ಟ್ರೇಲಿಯಾದ ವೇಗಿ ಹೇಜಲ್‌ವುಡ್, ಅಯ್ಯರ್ ಅವರನ್ನು ಶಾರ್ಟ್ ಬಾಲ್‌ನಲ್ಲಿ ಔಟ್ ಮಾಡಿದರು. ಈ ಮೂಲಕ ಹೇಜಲ್‌ವುಡ್ ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ ಎರಡರಲ್ಲೂ 13 ಇನ್ನಿಂಗ್ಸ್‌ಗಳಲ್ಲಿ ಏಳನೇ ಬಾರಿಗೆ ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದರು.

ಹೇಜಲ್‌ವುಡ್ ವಿಕೆಟ್ ಪಡೆದಿದ್ದಲ್ಲದೆ, ಭಾರತೀಯ ಬ್ಯಾಟ್ಸ್‌ಮನ್‌ಗಳು ಪ್ರತಿ ರನ್‌ಗೂ ಪರದಾಡುವಂತೆ ಮಾಡಿದರು. ಹೇಜಲ್‌ವುಡ್ ಈ ಪಂದ್ಯದಲ್ಲಿ ಏಳು ಓವರ್‌ಗಳನ್ನು ಬೌಲಿಂಗ್ ಮಾಡಿದರು. ಅಂದರೆ ಅವರು ಬೌಲ್ ಮಾಡಿದ ಒಟ್ಟಾರೆ 42 ಎಸೆತಗಳಲ್ಲಿ, 35 ಎಸೆತಗಳಲ್ಲಿ ಯಾವುದೇ ರನ್ ಬಿಟ್ಟುಕೊಡಲಿಲ್ಲ. ಅವರ ವಿರುದ್ಧ ಗಳಿಸಿದ 20 ರನ್‌ಗಳು ಮೂರು ಬೌಂಡರಿಗಳು, ನಾಲ್ಕು ಸಿಂಗಲ್ಸ್ ಮತ್ತು ನಾಲ್ಕು ವೈಡ್‌ಗಳಿಂದ ಬಂದವು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 19, 2025 04:34 PM