Bengaluru: ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ; ಪತ್ನಿಯಿಂದಲೇ ಪತಿ ಹತ್ಯೆ
ಮಗಳು ಮನೆ ಬಿಟ್ಟು ಹೋಗಿದ್ದಕ್ಕೆ ನಿತ್ಯ ಕಿರುಕುಳ ನೀಡುತ್ತಿದ್ದ ಕಾರಣ ಪತ್ನಿಯೇ ಪತಿಯನ್ನು ಭೀಕರವಾಗಿ ಕೊಂದಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಜನವರಿ 20ರಂದು ರಾತ್ರಿ ನಡೆದ ಜಗಳದಲ್ಲಿ ಪತ್ನಿ ಚಾಕುವಿನಿಂದ ಇರಿದು ಪತಿಯನ್ನು ಕೊಂದು, ಆತ್ಮಹತ್ಯೆಯ ಕಥೆ ಕಟ್ಟಿದ್ದಳು. ಪೊಲೀಸರ ತನಿಖೆಯಿಂದ ಸತ್ಯ ಬಯಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಬೆಂಗಳೂರು, ಜನವರಿ 22: ಮಕ್ಕಳ ವಿಚಾರವಾಗಿ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಪತ್ನಿಯೇ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಮುರುಗೆಶ್ ಮೃತ ವ್ಯಕ್ತಿಯಾಗಿದ್ದು, ಆರೋಪಿ ಪತ್ನಿ ಲಕ್ಷ್ಮೀಯನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು, ಮೊದಲನೆಯವಳಿಗೆ ಮದುವೆಯಾಗಿತ್ತು. ಉಳಿದ ಇಬ್ಬರು ಹೆಣ್ಣು ಮಕ್ಕಳು ತಾಯಿಯ ಜೊತೆ ಕೆಲಸಕ್ಕೆ ಹೋಗುತ್ತಿದ್ದರು. ಈ ನಡುವೆ ಎರಡನೇ ಮಗಳು ಪ್ರೀತಿಸಿದ ಯುವಕನ ಜೊತೆ ಎಸ್ಕೇಪ್ ಆಗಿದ್ದು, ಇದರಿಂದ ಮನೆಯಲ್ಲಿ ಜಗಳವಾಗುತ್ತಿತ್ತು. ಮಕ್ಕಳನ್ನ ಸರಿಯಾಗಿ ಬೆಳೆಸಿಲ್ಲ ಎಂದು ಆಪಾದಿಸಿ ಪತಿ ಮುರುಗೇಶ್ ನಿಂದನೆ ಮಾಡುತ್ತಿದ್ದರು. ಎರಡು ದಿನಗಳ ಹಿಂದೆಯೂ ಇದೇ ವಿಚಾರವಾಗಿ ಮತ್ತೆ ಜಗಳವಾಗಿದೆ. ಈ ವೇಳೆ ಮನೆಯಲ್ಲಿದ್ದ ಚಾಕುವಿನಿಂದ ಮುರುಗೇಶ್ ಎದೆಗೆ ಪತ್ನಿ ಲಕ್ಷ್ಮೀ ಇರಿದಿದ್ದು, ತೀವ್ರ ರಕ್ತಸ್ರಾವವಾಗಿ ಪತಿ ಕುಸಿದು ಬಿದ್ದಿದ್ದಾರೆ. ಪಕ್ಕದ ಮನೆಯವರು ಆ್ಯಂಬ್ಯುಲೆನ್ಸ್ಗೆ ಕರೆ ಮಾಡಿದ್ದರಾದರೂ ಅಷ್ಟರಲ್ಲೇ ಮುರುಗೇಶ್ ಮೃತಪಟ್ಟಿದ್ದರು. ಆತನೇ ಚುಚ್ಚಿಕೊಂಡಿದ್ದಾನೆ ಎಂದು ಲಕ್ಷ್ಮೀ ಮೊದಲು ಕತೆ ಕಟ್ಟಿದ್ದಳಾದರೂ ಪೋಲಿಸರ ತನಿಖೆಯಲ್ಲಿ ಕೊಲೆ ಮಾಡಿರೋದನ್ನು ಒಪ್ಪಿಕೊಂಡಿದ್ದಾಳೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
