ಅಶ್ವಥ್ ನಾರಾಯಣ ಸುಮ್ಮನಿದ್ದರೆ ಸರಿ, ಇಲ್ಲದಿದ್ದರೆ ಅವರ ಹಗರಣಗಳನ್ನೆಲ್ಲ ಬಯಲು ಮಾಡಬೇಕಾಗುತ್ತದೆ: ಕುಮಾರಸ್ವಾಮಿ

ತಾವು ಬಿಜೆಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಸರ್ಕಾರವನ್ನು ನಿರ್ವಹಿಸಿದಾಗ ಭ್ರಷ್ಟಾಚಾರ ನಡೆದಿರುವ ಬಗ್ಗೆ ಅಶ್ವಥ್ ನಾರಾಯಣ ಅವರು ದಾಖಲೆ ಒದಗಿಸಲಿ. ಅವರ ಸರ್ಕಾರವೇನಾದರೂ ಭಜನೆ ಮಾಡುತ್ತಿದೆಯಾ? ತಮ್ಮ ವಿರುದ್ಧ ತನಿಖೆಗೆ ಆದೇಶ ನೀಡಲಿ ಎಂದು ಅವರು ಹೇಳಿದರು.

TV9kannada Web Team

| Edited By: Arun Belly

May 11, 2022 | 5:39 PM

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ನಗರದ ಮಹಾಲಕ್ಷ್ಮಿ ಲೇಔಟ್ (Mahalaksmi Layout) ನಲ್ಲಿರುವ ಖಾಸಗಿ ಶಾಲೆಯೊಂದು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ನೀಡಿರುವ ಮಾನಸಿಕ ಕಿರುಕುಳದ ಬಗ್ಗೆ ಕೆಂಡ ಕಾರಿದರು. ಪೋಷಕರು ಮತ್ತು ಮಕ್ಕಳು ಅನುಭವಿಸಿರುವ ದೃಶ್ಯಗಳನ್ನು ಟವಿಯಲ್ಲಿ ನೋಡಿದಾಗ ಮನಸ್ಸಿಗೆ ಕಿರಿಕಿರಿ ಉಂಟಾಯಿತೆಂದು ಹೇಳಿದ ಕುಮಾರಸ್ವಾಮಿ ಅವರು ಇದು ಕೇವಲ ಒಂದು ಖಾಸಗಿ ಶಾಲೆಯ ಕತೆಯಲ್ಲ, ಹಲವಾರು ಖಾಸಗಿ ಶಾಲೆಗಳ ಮಕ್ಕಳು ಹಾಗೂ ಅವರ ತಂದೆ ತಾಯಿಗಳು ಹಿಂಸೆ ಅನುಭವಿಸುತ್ತಿದ್ದಾರೆ. ಸರ್ಕಾರ ಮಹಾಲಕ್ಷ್ಮಿ ಲೇಔಟ್ ಶಾಲೆಯ ಮೇಲೆ ಕ್ರಮ ತೆಗೆದುಕೊಳ್ಳಬೇಕು ಅಂತ ಅಗ್ರಹಿಸಿದರು. ಇಂಥ ಘಟನೆಗಳನ್ನು ಗಮನದಲ್ಲಿಟ್ಟುಕೊಂಡೇ ತಾವು ಪಂಚತಂತ್ರ (Panchatantha) ಯೋಜನೆಯನ್ನು ರೂಪಿಸಿ ಸರ್ಕಾರೀ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಲು ತವಕಿಸುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ಅವರು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರದ ಪ್ರಕರಣಗಳು ನಡೆದಿವೆ ಅಂತ ಹೇಳಿರುವುದನ್ನು ಮಾಧ್ಯಮದವರು ತಿಳಿಸಿದಾಗ ಅವರು ಕೆಂಡಾಮಂಡಲವಾದರು. ತಾವು ಬಿಜೆಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಸರ್ಕಾರವನ್ನು ನಿರ್ವಹಿಸಿದಾಗ ಭ್ರಷ್ಟಾಚಾರ ನಡೆದಿರುವ ಬಗ್ಗೆ ಅಶ್ವಥ್ ನಾರಾಯಣ ಅವರು ದಾಖಲೆ ಒದಗಿಸಲಿ. ಅವರ ಸರ್ಕಾರವೇನಾದರೂ ಭಜನೆ ಮಾಡುತ್ತಿದೆಯಾ? ತಮ್ಮ ವಿರುದ್ಧ ತನಿಖೆಗೆ ಆದೇಶ ನೀಡಲಿ ಎಂದು ಅವರು ಹೇಳಿದರು.

40 ಪರ್ಸೆಂಟ್ ಕಮೀಶನ್ ತೆಗೆದುಕೊಳ್ಳಲು ನಾನು ಬಂಗಾರದ ತಟ್ಟೆ ಇಟ್ಟುಕೊಂಡಿದ್ದೀನಾ? ಸಹ-ಪ್ರಾಧ್ಯಾಪಕರ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಸುಮಾರು 450 ಕೋಟಿ ರೂ. ಗಳಷ್ಟು ಅವ್ಯವಹಾರ ನಡೆದಿದೆ. ಅಶ್ವಥ್ ನಾರಾಯಣ ಸುಮ್ಮನಿದ್ದರೆ ಸರಿ, ಇಲ್ಲದಿದ್ದರೆ, ಎಲ್ಲ ಹಗರಣಗಳ ಹೂರಣ ಬಯಲು ಮಾಡುತ್ತೇನೆ, ನನ್ನ ವಿರುದ್ಧ ಅವರಿಗೆ ಏನೂ ಸಿಕ್ಕಲಾರದು, ಆದರೆ ಅವರ ಬಗ್ಗೆ ಬೇಕಾದಷ್ಟು ಪುರಾವೆಗಳು ನನ್ನಲ್ಲಿವೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.

ಇದನ್ನೂ ಓದಿ:   ಕುಮಾರಸ್ವಾಮಿಗೆ ಮತಿಭ್ರಮಣೆಯಾಗಿ ಹುಚ್ಚು ಹಿಡಿದಿದೆ; ಹೆಚ್ಡಿಕೆ, ಬಿಕೆ ಹರಿಪ್ರಸಾದ್ ವಿರುದ್ಧ ಶ್ರೀರಾಮ ಸೇನೆ ತೀವ್ರ ವಾಗ್ದಾಳಿ

Follow us on

Click on your DTH Provider to Add TV9 Kannada