ಅನುದಾನ ವಾಪಸ್ಸು ಬರದಿದ್ದರೆ ಈ ಬಾರಿ ಪ್ರತಿಭಟನೆ ಮಾಡಲ್ಲ ಮತ್ತು ಕೈಕಾಲು ಸಹ ಹಿಡಿಯಲ್ಲ: ಮುನಿರತ್ನ, ಬಿಜೆಪಿ ಶಾಸಕ

|

Updated on: Oct 19, 2023 | 1:17 PM

ಮುನಿರತ್ನರನ್ನು ತಮ್ಮ ನಿವಾಸಕ್ಕೆ ಕರೆಸಿದ್ದ ಶಿವಕುಮಾರ್ ಕಾಮಗಾರಿಗಳ ಪಟ್ಟಿ ನೀಡುವಂತೆ ಹೇಳಿ ಅನುದಾನವನ್ನು ರೀಡೈರೆಕ್ಟ್ ಮಾಡುವ ಆಶ್ವಾಸನೆ ನೀಡಿದ್ದರು. ಆದರೆ, ಮುನಿರತ್ನ ಅವರ ಮನವಿ ಇನ್ನೂ ಪುರಸ್ಕೃತಗೊಂಡಿಲ್ಲ. ಪಟ್ಟಿಯನ್ನು ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಅವರಿಗೆ ನೀಡಿದ್ದು ಅನುದಾನಕ್ಕಾಗಿ ಕಾಯುತ್ತಿರುವೆ ಎಂದು ಮುನಿರತ್ನ ಹೇಳಿದರು.

ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು (Munirathna Naidu) ತಮ್ಮ ಕಚೇರಿಯಲ್ಲಿ ಇವತ್ತು ಮತ್ತೊಂದು ಸುದ್ದಿಗೋಷ್ಟಿ ನಡೆಸಿ ತಮ್ಮ ಕ್ಷೇತ್ರದ ಅಬಿವೃದ್ಧಿ ಕಾರ್ಯಗಳಿಗೆ ಹಿಂದಿನ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ್ದ ರೂ.126 ಕೋಟಿ ಸಿಗಲೇಬೇಕು ಅಂತ ಹೇಳಿದರು. ಕಳೆದ ವಾರವೂ ಅವರು ಒಂದು ಸುದ್ದಿಗೋಷ್ಟಿ ನಡೆಸಿ, ಮರುದಿನ ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಮುಂದೆ ನಿರಶನ ನಡೆಸಿದ ಬಳಿಕ ಅರಮನೆ ಮೈದಾನದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿಯಾಗಿ ಕಾಲು ಮುಟ್ಟಿ ನಮಸ್ಕರಿಸಿ ಹಿಂಪಡೆದಿರುವ ಅನುದಾನವನ್ನು ವಾಪಸ್ಸು ನೀಡಬೇಕೆಂದು ಮನವಿ ಮಾಡಿದ್ದರು. ಮುನಿರತ್ನರನ್ನು ತಮ್ಮ ನಿವಾಸಕ್ಕೆ ಕರೆಸಿದ್ದ ಶಿವಕುಮಾರ್ ಕಾಮಗಾರಿಗಳ ಪಟ್ಟಿ ನೀಡುವಂತೆ ಹೇಳಿ ಅನುದಾನವನ್ನು ರೀಡೈರೆಕ್ಟ್ (redirect) ಮಾಡುವ ಆಶ್ವಾಸನೆ ನೀಡಿದ್ದರು. ಆದರೆ, ಮುನಿರತ್ನ ಅವರ ಮನವಿ ಇನ್ನೂ ಪುರಸ್ಕೃತಗೊಂಡಿಲ್ಲ. ಹಾಗಾಗೇ, ಇಂದು ಸುದ್ದಿಗೋಷ್ಟಿ ನಡೆಸಿದ ಅವರು, ಪಟ್ಟಿಯನ್ನು ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಅವರಿಗೆ ನೀಡಿದ್ದು ಅನುದಾನಕ್ಕಾಗಿ ಕಾಯುತ್ತಿರುವೆ ಎಂದರು. ಅನುದಾನ ವಾಪಸ್ಸು ಬಾರದಿದ್ದರೆ ಮುಂದಿನ ಕ್ರಮ ಏನು ಅಂತ ಅವರನ್ನು ಕೇಳಿದರೆ, ನೋಡೋಣ, ಆದರೆ ಈ ಬಾರಿ ಪ್ರತಿಭಟನೆ ಅಥವಾ ಕಾಲುಹಿಡಿಯುದನ್ನಂತೂ ಮಾಡಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on