IND vs AUS: ಏನಾಯ್ತು ಕೊಹ್ಲಿ? ಬ್ಯಾಟಿಂಗ್ನಲ್ಲಿ ರನ್ ಬರುತ್ತಿಲ್ಲ; ಇತ್ತ ಕ್ಯಾಚ್ ಕೂಡ ಹಿಡಿಯುತ್ತಿಲ್ಲ..!
Virat Kohli Drops Easiest Catch: ವಿರಾಟ್ ಕೊಹ್ಲಿ ಇತ್ತೀಚೆಗೆ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಎರಡರಲ್ಲೂ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇದೀಗ ಸುಲಭ ಕ್ಯಾಚ್ ಕೈಚೆಲ್ಲಿರುವ ಕೊಹ್ಲಿ, ಮತ್ತೊಮ್ಮೆ ತಂಡವನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಕೊಹ್ಲಿಯ ಕಳಪೆ ಫಿಲ್ಡಿಂಗ್ಗೆ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.
ವಿರಾಟ್ ಕೊಹ್ಲಿ… ಕ್ರಿಕೆಟ್ ಲೋಕದಲ್ಲಿ ಅನಭಿಶಕ್ತ ದೊರೆಯಾಗಿ ಮೆರೆಯುತ್ತಿರುವ ಈ ರನ್ ಸಾಮಾಟ್ರ, ಮುರಿಯದ ದಾಖಲೆಗಳಿಲ್ಲ, ನಿರ್ಮಿಸದ ದಾಖಲೆಗಳೂ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಆದ್ಯಾಕೋ ಕೊಹ್ಲಿ, ಕ್ರಿಕೆಟ್ ಮರೆತವರಂತೆ ವರ್ತಿಸುತ್ತಿದ್ದಾರೆ. ಕೊಹ್ಲಿ ಎಂದರೆ ನಮಗೆಲ್ಲ ಥಟ್ಟನೇ ನೆನಪಾಗುತ್ತಿದ್ದು, ಬ್ಯಾಟಿಂಗ್ನಲ್ಲಿ ರನ್ಗಳ ಗುಡ್ಡೆ ಹಾಕುವ, ಫೀಲ್ಡಿಂಗ್ನಲ್ಲಿ ಚಿರತೆಯಂತೆ ಎಗರಿ ಅದ್ಭುತ ಕ್ಯಾಚ್ಗಳನ್ನು ಹಿಡಿಯುವ ಅದ್ಭುತ ಫಿಲ್ಡರ್ ಆಗಿ. ಆದರೀಗ ಈ ಎರಡೂ ವಿಭಾಗಗಳಲ್ಲಿ ಕೊಹ್ಲಿಯ ವೈಫಲ್ಯ ಎದ್ದು ಕಾಣಿಸುತ್ತಿದೆ. ಬ್ಯಾಟಿಂಗ್ನಲ್ಲಿ ರನ್ ಬರ ಎದುರಿಸುತ್ತಿರುವ ವಿರಾಟ್, ಇತ್ತೀಚೆಗೆ ಫೀಲ್ಡಿಂಗ್ನಲ್ಲೂ ಹಲವು ಸುಲಭ ಕ್ಯಾಚ್ಗಳನ್ನು ಕೈಚೆಲ್ಲಿ ತುಂಬಾ ದುಬಾರಿಯಾಗುತ್ತಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪರ್ತ್ ಟೆಸ್ಟ್ನಲ್ಲೂ ಕೊಹ್ಲಿಯ ಕಳಪೆ ಫೀಲ್ಡಿಂಗ್ ಮತ್ತೆ ಮುನ್ನೆಲೆಗೆ ಬಂದಿದೆ.
ಬುಮ್ರಾ ಮಾರಕ ದಾಳಿ
ವಾಸ್ತವವಾಗಿ ಕೇವಲ 150 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿರುವ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶಿಸುತ್ತಿದೆ. ನಾಯಕ ಬುಮ್ರಾ, ಕಾಂಗರೂ ಬ್ಯಾಟ್ಸ್ಮನ್ಗಳನ್ನು ಒಬ್ಬೋಬ್ಬರಾಗಿ ಪೆವಿಲಿಯನ್ಗಟ್ಟುತ್ತಿದ್ದಾರೆ. ಬುಮ್ರಾ ಪಂದ್ಯದ ಮೂರನೇ ಓವರ್‌ನ ಮೂರನೇ ಎಸೆತದಲ್ಲಿ ಮೊದಲ ಪಂದ್ಯವನ್ನಾಡುತ್ತಿರುವ ಮೆಕ್‌ಸ್ವೀನಿಯನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದರು.
ಹೀಗಾಗಿ ಮೂರನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಟೆಸ್ಟ್ ಸ್ಪೆಷಲಿಸ್ಟ್ ಮಾರ್ನಸ್ ಲಬುಶೇನ್ ಬ್ಯಾಟಿಂಗ್ಗೆ ಇಳಿದರು. ಈ ವೇಳೆ ಅದೇ ಓವರ್ನಲ್ಲಿ ಬುಮ್ರಾಗೆ ಎರಡನೇ ವಿಕೆಟ್ ಪಡೆಯುವ ಅವಕಾಶವಿತ್ತು. ಆದರೆ ಸ್ಲಿಪ್ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಮಾಡಿದ ಎಡವಟ್ಟು, ವಿಕೆಟ್ ಸಿಗುವ ಅವಕಾಶವನ್ನು ಕಳೆದುಕೊಳ್ಳುವಂತೆ ಮಾಡಿತು.
ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ
ಮೂರನೇ ಓವರ್‌ನ ಮೂರನೇ ಎಸೆತದಲ್ಲಿ ಮೆಕ್‌ಸ್ವೀನಿಯನ್ನು ಔಟ್ ಮಾಡಿದ ಬುಮ್ರಾ, ಅದೇ ಓವರ್‌ನ ಐದನೇ ಎಸೆತವನ್ನು ಗುಡ್ ಲೆಂಗ್ತ್ನಲ್ಲಿ ಆಫ್ ಸ್ಟಂಪ್ ಹೊರಗೆ ಬೌಲ್ ಮಾಡಿದರು. ಈ ಎಸೆತವನ್ನು ಡ್ರೈವ್ ಮಾಡಲು ಯತ್ನಿಸಿದ ಲಬುಶೇನ್, ಎರಡನೇ ಸ್ಲಿಪ್ನಲ್ಲಿ ನಿಂತಿದ್ದ ಕೊಹ್ಲಿಗೆ ಸುಲಭ ಕ್ಯಾಚ್ ನೀಡಿದರು. ಈ ವೇಳೆ ಕೊಹ್ಲಿ ಕೂಡ ಉತ್ತಮವಾಗಿ ಕ್ಯಾಚ್ ತೆಗೆದುಕೊಂಡರು. ಆದರೆ ಆ ಕ್ಯಾಚನ್ನು ಪೂರ್ಣಗೊಳಿಸಲು ಕೊಹ್ಲಿಗೆ ಸಾಧ್ಯವಾಗಲಿಲ್ಲ. ಕೊಹ್ಲಿಯ ಮೊಣಕಾಲು ನೆಲಕ್ಕೆ ತಾಗುತ್ತಿದ್ದಂತೆ ಇತ್ತ, ಕೊಹ್ಲಿಯ ಕೈಸೇರಿದ್ದ ಚೆಂಡು ಕೂಡ ಕೈಯಿಂದ ಜಾರಿ ಕೆಳಗೆ ಬಿದ್ದಿತು. ಅಷ್ಟರಲ್ಲಾಗಲೇ ತಂಡದ ಆಟಗಾರರೆಲ್ಲರೂ ಸಂಭ್ರಮಿಸಲು ಶುರು ಮಾಡಿದ್ದರು. ಆದರೆ ಕೊಹ್ಲಿಯೇ, ಈ ಕ್ಯಾಚ್ ಕಂಪ್ಲಿಟ್ ಆಗಿಲ್ಲ ಎಂಬ ಸನ್ನೆಯನ್ನು ನೀಡುವ ಮೂಲಕ ಆಟಗಾರರಲ್ಲಿ ನಿರಾಸೆ ಮೂಡಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ