Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ಮಗಳ ದಿನದಂದು ಅಶ್ವಿನ್ ನೀಡಿದ ವಿಶೇಷ ಉಡುಗೊರೆಯನ್ನು ನಯವಾಗಿ ತಿರಸ್ಕರಿಸಿದ ಮಕ್ಕಳು; ವಿಡಿಯೋ ನೋಡಿ

ವಿಶ್ವ ಮಗಳ ದಿನದಂದು ಅಶ್ವಿನ್ ನೀಡಿದ ವಿಶೇಷ ಉಡುಗೊರೆಯನ್ನು ನಯವಾಗಿ ತಿರಸ್ಕರಿಸಿದ ಮಕ್ಕಳು; ವಿಡಿಯೋ ನೋಡಿ

ಪೃಥ್ವಿಶಂಕರ
|

Updated on:Sep 23, 2024 | 4:09 PM

R Ashwin: ಚೆನ್ನೈನ ಚೆಪಾಕ್ ಮೈದಾನ ಅಶ್ವಿನ್ ಅವರ ತವರು ಮೈದಾನವಾಗಿದೆ. ಹೀಗಾಗಿ ಈ ಪಂದ್ಯವನ್ನು ವೀಕ್ಷಿಸಲು ಅಶ್ವಿನ್ ಅವರ ಪತ್ನಿ ಮತ್ತು ಪುತ್ರಿಯರು ಸಹ ಕ್ರೀಡಾಂಗಣಕ್ಕೆ ಬಂದಿದ್ದರು. ಪಂದ್ಯ ಮುಗಿದ ಬಳಿಕ ಮೈದಾನದಲ್ಲಿ ಅಶ್ವಿನ್​ರನ್ನು ಭೇಟಿಯಾದ ಅವರ ಮಡದಿ ಹಾಗೂ ಮಕ್ಕಳು, ಅಶ್ವಿನ್ ಜೊತೆ ನಡೆಸಿದ ಮಾತುಕತೆಯ ವಿಡಿಯೋವನ್ನು ಇದೀಗ ಬಿಸಿಸಿಐ ಹಂಚಿಕೊಂಡಿದೆ.

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನಲ್ಲಿ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದ್ದ ಅಶ್ವಿನ್, ಆನಂತರ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 6 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಹೀಗಾಗಿ ಪಂದ್ಯದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಅಶ್ವಿನ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಚೆನ್ನೈನ ಚೆಪಾಕ್ ಮೈದಾನ ಅಶ್ವಿನ್ ಅವರ ತವರು ಮೈದಾನವಾಗಿದೆ. ಹೀಗಾಗಿ ಈ ಪಂದ್ಯವನ್ನು ವೀಕ್ಷಿಸಲು ಅಶ್ವಿನ್ ಅವರ ಪತ್ನಿ ಮತ್ತು ಪುತ್ರಿಯರು ಸಹ ಕ್ರೀಡಾಂಗಣಕ್ಕೆ ಬಂದಿದ್ದರು. ಪಂದ್ಯ ಮುಗಿದ ಬಳಿಕ ಮೈದಾನದಲ್ಲಿ ಅಶ್ವಿನ್​ರನ್ನು ಭೇಟಿಯಾದ ಅವರ ಮಡದಿ ಹಾಗೂ ಮಕ್ಕಳು, ಅಶ್ವಿನ್ ಜೊತೆ ನಡೆಸಿದ ಮಾತುಕತೆಯ ವಿಡಿಯೋವನ್ನು ಇದೀಗ ಬಿಸಿಸಿಐ ಹಂಚಿಕೊಂಡಿದೆ.

ಏನು ಉಡುಗೊರೆ ನೀಡುತ್ತೀರಿ?

ಬಿಸಿಸಿಐ ಹಂಚಿಕೊಂಡಿರುವ ವಿಡಿಯೋದಲ್ಲಿ ಮೊದಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಅಶ್ವಿನ್​ಗೆ ಅವರ ಪತ್ನಿ ಪ್ರೀತಿ ನಾರಾಯಣನ್ ಮತ್ತು ಇಬ್ಬರು ಪುತ್ರಿಯರು ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಪ್ರೀತಿ, ಹೆಣ್ಣು ಮಕ್ಕಳ ದಿನದಂದು ನಿಮ್ಮ ಮಕ್ಕಳಿಗೆ ಏನು ಉಡುಗೊರೆ ನೀಡುತ್ತೀರಿ ಎಂದು ಅಶ್ವಿನ್ ಬಳಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅಶ್ವಿನ್, ಬಾಂಗ್ಲಾದೇಶ ವಿರುದ್ಧ 6 ವಿಕೆಟ್ ತೆಗೆದ ಚೆಂಡನ್ನು ಅವರಿಗೆ ಉಡುಗೊರೆಯಾಗಿ ನೀಡುತ್ತೇನೆ ಎಂದರು. ಇದಕ್ಕೆ ಅವರ ಮಕ್ಕಳು ಅದು ನನಗೆ ಬೇಡ ಎಂದರು. ಹಾಗಾದ್ರೆ ನಿಮಗೆ ಏನು ಬೇಕು ಎಂದು ಅಶ್ವಿನ್ ಕೇಳಿದರು. ಇದಕ್ಕೆ ಅವರ ಮಕ್ಕಳು ಏನನ್ನು ಹೇಳದೆ ಸುಮ್ಮನಾದರು.

ಈ ನೆಲದಲ್ಲಿ ಶಕ್ತಿ ಇದೆ

ನಿಮ್ಮ ತವರು ಮೈದಾನದಲ್ಲಿ ಈ ರೀತಿಯ ಪ್ರದರ್ಶನ ನೀಡಿರುವುದು ನಿಮಗೆ ಹೇಗೆ ಅನಿಸುತ್ತಿದೆ ಎಂದು ಪ್ರೀತಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಶ್ವಿನ್, ಈ ಪಂದ್ಯದಲ್ಲಿ ಶತಕ ಗಳಿಸುವ ನಿರೀಕ್ಷೆ ಇರಲಿಲ್ಲ. ಮೊದಲ ದಿನವು ತುಂಬಾ ವೇಗವಾಗಿ ನಡೆದಿದ್ದರಿಂದ ಹೇಗೆ ಪ್ರತಿಕ್ರಿಯಿಸಬೇಕೆಂದು ನನಗೆ ತಿಳಿದಿಲ್ಲ. ನಾನು ಇಲ್ಲಿಗೆ ಬಂದು ಶತಕ ಬಾರಿಸುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ನನಗೆ ಬಹಳ ಸಮಯದಿಂದ ಬ್ಯಾಟಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಅವಕಾಶ ಸಿಕ್ಕಾಗ ಶತಕ ಸಿಡಿಸಿರುವುದು ಉತ್ತಮವಾಗಿ ಕಾಣುತ್ತದೆ. ನಾನು ಇಲ್ಲಿಗೆ ಬಂದಾಗಲೆಲ್ಲಾ ವಿಶೇಷ ಅನಿಸುತ್ತದೆ. ಈ ನೆಲದಲ್ಲಿ ವಿಶೇಷ ಶಕ್ತಿ ಇದೆ ಅದು ನನ್ನನ್ನು ಮುಂದೆ ಸಾಗುವಂತೆ ಮಾಡುತ್ತದೆ ಎಂದರು.

ನನ್ನನು ನೋಡಿ ನೀವು ಏಕೆ ಕೈಬೀಸಲಿಲ್ಲ?

ಇನ್ನು ಮೊದಲ ದಿನ ನನ್ನನು ನೋಡಿ ನೀವು ಏಕೆ ಕೈಬೀಸಲಿಲ್ಲ ಎಂದು ಅಶ್ವಿನ್ ಬಳಿ ಪ್ರೀತಿ ತಮಾಷೆಯಾಗಿ ಕೇಳಿದರು. ಇದಕ್ಕೆ ಅಶ್ವಿನ್, ನಾನು ನಿಜವಾಗಿಯೂ ನೋಡಲಿಲ್ಲ. ನಾನು ಆಟವಾಡುವಾಗ ನನ್ನ ಕುಟುಂಬವನ್ನು ನೋಡುವುದು ನನಗೆ ತುಂಬಾ ಕಷ್ಟ. ಆದರೆ ನಾನು ನೋಡಲು ಪ್ರಯತ್ನಿಸುತ್ತೇನೆ. ಏಕೆಂದರೆ ಪಂದ್ಯದ ನಂತರ ಮಕ್ಕಳು, ನೀವು ಯಾಕೆ ಹಾಯ್ ಹೇಳಲಿಲ್ಲ ಎಂದು ನನ್ನನ್ನು ಯಾವಾಗಲೂ ಕೇಳುತ್ತಾರೆ ಎಂದು ಅಶ್ವಿನ್ ಹೇಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 23, 2024 04:03 PM