‘ಆಕ್ರಮಣಕಾರಿ ಆಟವೇ ಮೂಲ ಮಂತ್ರ’; ನ್ಯೂಜಿಲೆಂಡ್ ಸರಣಿಗೂ ಮುನ್ನ ‘ಗಂಭೀರ’ ಮಾತುಗಳನ್ನಾಡಿದ ಗೌತಮ್

|

Updated on: Oct 14, 2024 | 6:59 PM

Gautam Gambhir: ಟೆಸ್ಟ್ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್, ಭವಿಷ್ಯದಲ್ಲಿ ಟೀಂ ಇಂಡಿಯಾ ಹೇಗಿರಲಿದೆ ಎಂಬುದಕ್ಕೆ ಬೆಳಕು ಚೆಲ್ಲಿದ್ದಾರೆ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಗಂಭೀರ್, ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ಕೊಡುವುದಾಗಿ ಹೇಳಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಹಾಗೂ ಟಿ20 ಸರಣಿಯನ್ನು ಗೆದ್ದುಕೊಂಡಿದ್ದ ಟೀಂ ಇಂಡಿಯಾ ಇದೀಗ ನ್ಯೂಜಿಲೆಂಡ್ ತಂಡಕ್ಕೆ ಆತಿಥ್ಯವಹಿಸಲು ಸಜ್ಜಾಗಿದೆ. ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಬೆಂಗಳೂರಿನಲ್ಲಿ ಅಕ್ಟೋಬರ್ 16 ರಿಂದ ಆರಂಭವಾಗಲಿದೆ. ಆದರೆ ಈ ಟೆಸ್ಟ್ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್, ಭವಿಷ್ಯದಲ್ಲಿ ಟೀಂ ಇಂಡಿಯಾ ಹೇಗಿರಲಿದೆ ಎಂಬುದಕ್ಕೆ ಬೆಳಕು ಚೆಲ್ಲಿದ್ದಾರೆ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಗಂಭೀರ್, ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ಕೊಡುವುದಾಗಿ ಹೇಳಿದ್ದಾರೆ.

ಆಕ್ರಮಣಕಾರಿ ಆಟ

ಬೆಂಗಳೂರು ಟೆಸ್ಟ್ ಪಂದ್ಯದ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ‘ಅಗತ್ಯವಿದ್ದರೆ, ಟೆಸ್ಟ್ ಪಂದ್ಯದಲ್ಲಿ ಫಲಿತಾಂಶ ಹೊರತರಬೇಕೆಂದರೆ 2 ದಿನಗಳ ಕಾಲ ಬ್ಯಾಟಿಂಗ್ ಮಾಡುವ ಕೌಶಲ್ಯ ಭಾರತೀಯ ಬ್ಯಾಟರ್‌ಗಳಿಗೆ ಇದೆ. ಹಲವಾರು ಪ್ರತಿಭಾವಂತ ಬ್ಯಾಟರ್‌ಗಳನ್ನು ಹೊಂದಿರುವ ಭಾರತ ತಂಡದ ಬಗ್ಗೆ ನನಗೆ ಹೆಮ್ಮೆಯಿದೆ. ಬಾಂಗ್ಲಾದೇಶ ವಿರುದ್ಧದ ಕಾನ್ಪುರ ಟೆಸ್ಟ್​ನ ಎರಡು ದಿನದಾಟ ಮಳೆಯಿಂದ ರದ್ದಾಯಿತು. ಆದಾಗ್ಯೂ ಫಲಿತಾಂಶಕ್ಕಾಗಿ ಆಡಿದ ಟೀಂ ಇಂಡಿಯಾ ಪ್ರತಿ ಓವರ್​ಗೆ 8 ರನ್​ಗಳಂತೆ ರನ್ ಕಲೆಹಾಕಿತು. ಅಂತಿಮವಾಗಿ ನಿರ್ಧಿಷ್ಟ ಫಲಿತಾಂಶ ಹೊರಬಿತ್ತು.

ಅದು ನಮಗೆ ಕೊನೆಯ ಆಯ್ಕೆ

‘ನಾವು ಒಂದು ದಿನದಲ್ಲಿ 400 ರನ್ ಗಳಿಸುವ ಮತ್ತು ಟೆಸ್ಟ್ ಪಂದ್ಯದಲ್ಲಿ ಫಲಿತಾಂಶ ಹೊರತರಲು 2 ದಿನಗಳ ಕಾಲ ಬ್ಯಾಟಿಂಗ್ ಮಾಡುವ ತಂಡವಾಗಲು ಬಯಸುತ್ತೇವೆ. ಇದೇ ನಾವು ಹುಡುಕುತ್ತಿರುವ ಬೆಳವಣಿಗೆ ಮತ್ತು ಹೊಂದಾಣಿಕೆಯಾಗಿದೆ. ನಮ್ಮ ಡ್ರೆಸ್ಸಿಂಗ್ ರೂಮ್‌ನಲ್ಲಿ ಬಲಿಷ್ಠ ಬ್ಯಾಟಿಂಗ್ ಪಡೆ ಇದೆ. ಪಂದ್ಯದಲ್ಲಿ ಗೆಲುವು ಸಾಧಿಸುವುದೇ ಅದರ ಗುರಿಯಾಗಿದೆ. ಒಂದು ವೇಳೆ ನಾವು ಡ್ರಾಗಾಗಿ ಆಡಬೇಕಾದ ಪರಿಸ್ಥಿತಿ ಬಂದರೆ, ಅದು ನಮ್ಮ ಎರಡನೇ ಮತ್ತು ಮೂರನೇ ಆಯ್ಕೆಯಾಗಿದೆ ಎಂದು ಗಂಭೀರ್ ಹೇಳಿದರು.

ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರಬೇಕು

ಇನ್ನು ತಂಡದ ಬ್ಯಾಟರ್​ಗಳ ಸಹಜ ಸಾಮರ್ಥ್ಯದ ಬಗ್ಗೆ ಮಾತನಾಡಿದ ಗಂಭೀರ್, ‘ಆಟಗಾರರು ಸ್ವಭಾವತಃ ಆಕ್ರಮಣಕಾರಿಯಾಗಿದ್ದರೆ ಅವರನ್ನು ನಿಯಂತ್ರಿಸಲು ನಾವು ಹೋಗುವುದಿಲ್ಲ ಮತ್ತು ರಕ್ಷಣಾತ್ಮಕವಾಗಿ ಆಡುವಂತೆ ಕೇಳಿಕೊಳ್ಳುವುದಿಲ್ಲ. ಒಂದು ದಿನದಲ್ಲಿ 400-500 ರನ್ ಗಳಿಸುವ ಆಟಗಾರರನ್ನು ನಾವು ಏಕೆ ನಿಯಂತ್ರಿಸಬೇಕು. ಮತ್ತು ಟಿ 20 ಕ್ರಿಕೆಟ್‌ನ ವಿಷಯದಲ್ಲಿ, ನಾನು ಯಾವಾಗಲೂ ಹೇಳುತ್ತೇನೆ. ಹೆಚ್ಚು ರಿಸ್ಕ್ ತೆಗೆದುಕೊಂಡಷ್ಟು ಅದರ ಪ್ರತಿಫಲವೂ ಅಷ್ಟೇ ಇರುತ್ತದೆ. ಹಾಗೆಯೇ ರಿಸ್ಕ್ ಹೆಚ್ಚಾದಷ್ಟೂ ವೈಫಲ್ಯದ ಸಾಧ್ಯತೆಯೂ ಹೆಚ್ಚುತ್ತದೆ. ಈ ಧೋರಣೆಯಿಂದ ನಮ್ಮ ತಂಡ ಮುಂದೊಂದು ದಿನ 100 ರನ್‌ಗಳಿಗೆ ಔಟಾದಗಲು ನಾವು ಅದನ್ನು ಒಪ್ಪಿಕೊಳ್ಳಬೇಕು. ಹೀಗಾಗಿ ರಿಸ್ಕ್ ತೆಗೆದುಕೊಂಡು ಆಡುವ ಆಟಗಾರರಿಗೆ ನಾವು ಬೆಂಬಲ ನೀಡುವುದನ್ನು ಮುಂದುವರಿಸುತ್ತೇವೆ ಎಂದು ಗಂಭೀರ್ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 14, 2024 06:55 PM