ಪಾಕ್ ಬೌಲರ್ ಜೊತೆ ಪಿಚ್ ಮಧ್ಯದಲ್ಲೇ ಜಗಳಕ್ಕಿಳಿದ ವೈಭವ್ ಸೂರ್ಯವಂಶಿ; ವಿಡಿಯೋ ವೈರಲ್
India-Pak U19 Asia Cup Final: ದುಬೈನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಪಾಕಿಸ್ತಾನಕ್ಕೆ 191 ರನ್‌ಗಳಿಂದ ಸೋತು ಚಾಂಪಿಯನ್ ಪಟ್ಟ ಕಳೆದುಕೊಂಡಿತು. ಪಂದ್ಯದ ವೇಳೆ ಭಾರತದ ವೈಭವ್ ಸೂರ್ಯವಂಶಿ ವಿಕೆಟ್ ಪಡೆದ ಪಾಕ್ ಬೌಲರ್ ಅಲಿ ರಜಾ ಆಕ್ರಮಣಕಾರಿ ಸಂಭ್ರಮಾಚರಣೆ ಮಾಡಿ, ವೈಭವ್ ಬಳಿ ಏನನ್ನೋ ಹೇಳಿದ್ದರು. ಇದರಿಂದ ಕೆರಳಿದ ವೈಭವ್ ಪ್ರತ್ಯುತ್ತರ ನೀಡಿದ್ದರು. ಈ ಆಟಗಾರರ ನಡುವಿನ ವಾಗ್ಯುದ್ಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ಭಾನುವಾರ ನಡೆದ ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ 191 ರನ್‌ಗಳಿಂದ ಸೋತ ಭಾರತ ಚಾಂಪಿಯನ್ ಪಟ್ಟಕ್ಕೇರುವ ಅವಕಾಶದಿಂದ ವಂಚತಿವಾಯಿತು.ಭಾನುವಾರ ನಡೆದ ಅಂಡರ್-19 ಏಷ್ಯಾಕಪ್‌ನ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಭಾರತಕ್ಕೆ ಗೆಲ್ಲಲು 348 ರನ್‌ಗಳ ಗುರಿಯನ್ನು ನೀಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತ ತಂಡ ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಹೀಗಾಗಿ ತಂಡವು 26.2 ಓವರ್‌ಗಳಲ್ಲಿ ಕೇವಲ 156 ರನ್‌ಗಳಿಗೆ ಆಲೌಟ್ ಆಯಿತು.
ಇನ್ನು ಇದೇ ಪಂದ್ಯದ ಸಮಯದಲ್ಲಿ ಮೈದಾನದಲ್ಲಿ ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಯುದ್ಧವೇ ನಡೆಯಿತು. ಭಾರತದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಐದನೇ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡರು. ಇತ್ತ ವೈಭವ್ ವಿಕೆಟ್ ಪಡೆದ ಪಾಕಿಸ್ತಾನಿ ವೇಗದ ಬೌಲರ್ ಅಲಿ ರಜಾ ಆಕ್ರಮಣಕಾರಿ ಸಂಭ್ರಮಾಚರಣೆ ಮಾಡುವುದರ ಜೊತೆಗೆ ಪೆವಿಲಿಯನ್ತ್ತ ಹೋಗುತ್ತಿದ್ದ ವೈಭವ್ ಬಳಿ ಏನನ್ನೋ ಹೇಳಿದರು. ಇದರಿಂದ ಕೆರಳಿದ ವೈಭವ್ ಕೂಡ ಪಾಕ್ ವೇಗಿಗೆ ತಕ್ಕ ಪ್ರತ್ಯುತ್ತರ ನೀಡಿ ಪೆವಿಲಿಯನ್ ಸೇರಿಕೊಂಡರು. ಇದೀಗ ಇವರಿಬ್ಬರ ನಡುವೆ ವಾಗ್ಯುದ್ಧ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.