GT vs MI: W,W,W.. ಪವರ್‌ಪ್ಲೇನಲ್ಲೇ ಮುಂಬೈ ಪವರ್ ಕಸಿದ ಕಗಿಸೋ ರಬಾಡ
IPL 2026 Match 30: ಐಪಿಎಲ್ 2026 ರ 30ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗುಜರಾತ್ ಟೈಟಾನ್ಸ್ ವಿರುದ್ಧ ಕಳಪೆ ಆರಂಭ ಪಡೆಯಿತು. ರಬಾಡ ಮಾರಕ ದಾಳಿಗೆ ಸಿಲುಕಿ ಪವರ್‌ಪ್ಲೇನಲ್ಲೇ 3 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಚೊಚ್ಚಲ ಪಂದ್ಯವಾಡಿದ ಡ್ಯಾನಿಶ್ ಮಾಲೆವಾರ್, ಕ್ವಿಂಟನ್ ಡಿ ಕಾಕ್ ಮತ್ತು ಸೂರ್ಯಕುಮಾರ್ ಯಾದವ್ ರಬಾಡ ಬೌಲಿಂಗ್‌ನಲ್ಲಿ ಬೇಗನೆ ಔಟಾದರು, ಇದು ಮುಂಬೈ ಅಗ್ರ ಕ್ರಮಾಂಕದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.
ಐಪಿಎಲ್ 2026 ರ 30 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡಕ್ಕೆ ಎಂದಿನಂತೆ ಕಳಪೆ ಆರಂಭ ಸಿಕ್ಕಿತು. ಪವರ್‌ಪ್ಲೇನಲ್ಲಿಯೇ ತಂಡದ ಪ್ರಮುಖ 3 ವಿಕೆಟ್ಗಳು ಪತನವಾದವು. ರಬಾಡ ಅವರ ಮಾರಕ ದಾಳಿಗೆ ತತ್ತರಿಸಿದ ಮುಂಬೈ ಟಾಪ್ ಆರ್ಡರ್ ಬಹುಬೇಗನೇ ಪೆವಿಲಿಯನ್ ಸೇರಿಕೊಂಡಿತು.
ವಾಸ್ತವವಾಗಿ ಈ ಪಂದ್ಯಕ್ಕೆ ಮುಂಬೈ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿತ್ತು. ಅದರಂತೆ ರಿಯಾನ್ ರಿಕಲ್ಟನ್ ಬದಲಿಗೆ ಭಾರತದ ಯುವ ಆಟಗಾರ ಡ್ಯಾನಿಶ್ ಮಾಲೆವಾರ್ ಅವರಿಗೆ ಆಡುವ ಅವಕಾಶ ನೀಡಲಾಯಿತು. ಇದು ಡ್ಯಾನಿಶ್ ಮಾಲೆವಾರ್ ಅವರ ಚೊಚ್ಚಲ ಐಪಿಎಲ್ ಪಂದ್ಯವೂ ಆಗಿತ್ತು. ಆದರೆ ಮೊದಲ ಪಂದ್ಯದಲ್ಲಿ ಎಡವಿದ ಮಾಲೆವಾರ್ 4 ಎಸೆತಗಳನ್ನು ಕೇವಲ 2 ರನ್ ಬಾರಿಸಿ ರಬಾಡ ಬೌಲಿಂಗ್‌ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು.
ಇನ್ನು ಕಳೆದ ಪಂದ್ಯದಲ್ಲಿ ಅಬ್ಬರದ ಶತಕ ಬಾರಿಸಿದ ಕ್ವಿಂಟನ್ ಡಿ ಕಾಕ್ ಮೇಲೆ ಈ ಪಂದ್ಯದಲ್ಲೂ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಈ ಪಂದ್ಯದಲ್ಲಿ ನಿರೀಕ್ಷೆ ಪೂರ್ಣಗೊಳಿಸುವಲ್ಲಿ ಎಡವಿದ ಡಿ ಕಾಕ್ ಕೂಡ ರಬಾಡ ಅವರ ಎರಡನೇ ಓವರ್ನಲ್ಲಿ ಕ್ಯಾಚಿತ್ತು ಔಟಾದರು.
ಈ ಇಬ್ಬರು ಆರಂಭಿಕರು 25 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡ ಬಳಿಕ ಅನುಭವಿ ಸೂರ್ಯಕುಮಾರ್ ಯಾದವ್ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿತು. ಅದರಂತೆ ಸೂರ್ಯ ಕೂಡ ಸಿಕ್ಸರ್ ಬಾರಿಸುವ ಮೂಲಕ ಉತ್ತಮ ಆರಂಭ ಪಡೆದುಕೊಂಡರು. ಆದರೆ ರಬಾಡ ಎಸೆದ ಅವರ ಖೋಟಾದ ಮೂರನೇ ಓವರ್ನಲ್ಲಿ ಸೂರ್ಯ ಕ್ಲೀನ್ ಬೌಲ್ಡ್ ಆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

