Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
Novak Djokovic : ಈ ಬಾರಿಯ ವಿಂಬಲ್ಡನ್ ಟ್ರೋಫಿ ಗೆದ್ದಿದ್ದರೆ ಅತೀ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಗೆದ್ದ ವಿಶ್ವ ದಾಖಲೆ ನೊವಾಕ್ ಜೊಕೊವಿಚ್ ಪಾಲಾಗುತ್ತಿತ್ತು. ಏಕೆಂದರೆ ಗ್ರ್ಯಾಂಡ್ ಸ್ಲಾಮ್ ಇತಿಹಾಸದಲ್ಲೇ ಅತ್ಯಧಿಕ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ದಾಖಲೆಯನ್ನು ಜೊಕೊವಿಚ್ ಮಹಿಳಾ ತಾರೆ ಮಾರ್ಗರೇಟ್ ಕೋರ್ಟ್ ಜೊತೆ ಹಂಚಿಕೊಂಡಿದ್ದಾರೆ. ಇಬ್ಬರು ಒಟ್ಟು 24 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
25ನೇ ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಕನಸಿನೊಂದಿಗೆ ವಿಂಬಲ್ಡನ್ ಅಂಗಳಕ್ಕೆ ಬಂದಿದ್ದ ನೊವಾಕ್ ಜೊಕೊವಿಚ್ ಅವರ ಕನಸು ಮತ್ತೊಮ್ಮೆ ಕಮರಿದೆ. ಈ ಬಾರಿ ಅವರ ಕನಸಿಗೆ ಅಡ್ಡಿಯಾಗಿದ್ದು 23ರ ಹರೆಯದ ತಾರೆ ಯಾನಿಕ್ ಸಿನ್ನರ್. ಸೆಂಟರ್ ಕೋರ್ಟ್ನಲ್ಲಿ ನಡೆದ ವಿಂಬಲ್ಡನ್ 2025ರ ಸೆಮಿಫೈನಲ್ ಪಂದ್ಯದಲ್ಲಿ ಇಟಲಿಯನ್ ತಾರೆ ಯಾನಿಕ್ ಸಿನ್ನರ್ ಹಾಗೂ ಸರ್ಬಿಯನ್ ಟೆನಿಸ್ ಲೆಜೆಂಡ್ ನೊವಾಕ್ ಜೊಕೊವಿಚ್ ಮುಖಾಮುಖಿಯಾಗಿದ್ದರು. ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಲಾಗಿದ್ದ ಈ ಪಂದ್ಯವನ್ನು ಯಾನಿಕ್ ಏಕಪಕ್ಷೀಯವಾಗಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲ ಸೆಟ್ ಅನ್ನು 6-3 ಅಂತರದಿಂದ ಗೆಲ್ಲುವ ಮೂಲಕ ಯಾನಿಕ್ ಸಿನ್ನರ್ ಆರಂಭದಲ್ಲೇ ಜೊಕೊವಿಚ್ ಮೇಲೆ ಒತ್ತಡ ಹೇರಿದರು. ಇದಾಗ್ಯೂ ದ್ವಿತೀಯ ಸೆಟ್ನಲ್ಲಿ ಸರ್ಬಿಯನ್ ತಾರೆ ಕಂಬ್ಯಾಕ್ ಮಾಡುವ ನಿರೀಕ್ಷೆಯಿತ್ತು. ಆದರೆ ಈ ಬಾರಿ ಕೂಡ ಜೊಕೊವಿಚ್ ವಿರುದ್ಧ ಎಲ್ಲಾ ವಿಭಾಗದಲ್ಲೂ ಪ್ರಾಬಲ್ಯ ಮರೆದ ಸಿನ್ನರ್ 6-3 ಅಂತರದಿಂದ ದ್ವಿತೀಯ ಸೆಟ್ ಅನ್ನು ಗೆದ್ದರು.
ಇನ್ನು ಮೂರನೇ ಸೆಟ್ನಲ್ಲಿ ನೊವಾಕ್ ಜೊಕೊವಿಚ್ ಕಂಬ್ಯಾಕ್ ಪ್ರಯತ್ನ ನಡೆಸಿದರೂ, ಜಾನಿಕ್ ಸಿನ್ನರ್ ಅವರ ಪ್ರಬಲ ಹೊಡೆತಗಳಿಗೆ ಉತ್ತರ ನೀಡುವಲ್ಲಿ ವಿಫಲರಾದರು. ಅದರಲ್ಲೂ ಪಾದರಸದಂತೆ ಕೋರ್ಟ್ ತುಂಬಾ ಚಲಿಸಿದ ಸಿನ್ನರ್ ಬ್ಯಾಕ್ ಟು ಬ್ಯಾಕ್ ಪಾಯಿಂಟ್ಸ್ ಕಲೆಹಾಕುವಲ್ಲಿ ಯಶಸ್ವಿಯಾದರು. ಈ ಮೂಲಕ ಮೂರನೇ ಸೆಟ್ ಅನ್ನು ಕೂಡ 6-4 ಅಂತರದಿಂದ ಗೆದ್ದು ಯಾನಿಕ್ ಸಿನ್ನರ್ ಫೈನಲ್ಗೆ ಎಂಟ್ರಿ ಕೊಟ್ಟಿದ್ದಾರೆ.
ಕಮರಿದ ನೊವಾಕ್ ಕನಸು:
ಈ ಬಾರಿಯ ವಿಂಬಲ್ಡನ್ ಟ್ರೋಫಿ ಗೆದ್ದಿದ್ದರೆ ಅತೀ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಗೆದ್ದ ವಿಶ್ವ ದಾಖಲೆ ನೊವಾಕ್ ಜೊಕೊವಿಚ್ ಪಾಲಾಗುತ್ತಿತ್ತು. ಏಕೆಂದರೆ ಗ್ರ್ಯಾಂಡ್ ಸ್ಲಾಮ್ ಇತಿಹಾಸದಲ್ಲೇ ಅತ್ಯಧಿಕ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ದಾಖಲೆಯನ್ನು ಜೊಕೊವಿಚ್ ಮಹಿಳಾ ತಾರೆ ಮಾರ್ಗರೇಟ್ ಕೋರ್ಟ್ ಜೊತೆ ಹಂಚಿಕೊಂಡಿದ್ದಾರೆ. ಇಬ್ಬರು ಒಟ್ಟು 24 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಈ ದಾಖಲೆಯನ್ನು ಮುರಿಯುವ ಗುರಿಯೊಂದಿಗೆ ಈ ಬಾರಿ ವಿಂಬಲ್ಡನ್ ಅಂಗಳಕ್ಕೆ ಕಾಲಿಟ್ಟಿದ್ದ ನೊವಾಕ್ ಜೊಕೊವಿಚ್ ಅವರ ಕನಸು ಸೆಮಿಫೈನಲ್ ಸೋಲಿನೊಂದಿಗೆ ಕೊನೆಗೊಂಡಿದೆ. ಇನ್ನು ಆಗಸ್ಟ್ನಲ್ಲಿ ನಡೆಯಲಿರುವ ಯುಎಸ್ ಓಪನ್ ಮೂಲಕ ಜೊಕೊವಿಚ್ 25ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಕನಸನ್ನ ಈಡೇರಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.
ವಿಂಬಲ್ಡನ್ ಫೈನಲ್ 2025:
ಈ ಬಾರಿಯ ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ಯಾನಿಕ್ ಸಿನ್ನರ್ ಹಾಗೂ ಕಾರ್ಲೋಸ್ ಅಲ್ಕರಾಝ್ ಮುಖಾಮುಖಿಯಾಗಲಿದ್ದಾರೆ. ಯುವ ತರುಣರ ಕಾದಾಟಕ್ಕೆ ಸಾಕ್ಷಿಯಾಗಲಿರುವ ಈ ಪಂದ್ಯವು ಭಾನುವಾರ (ಜುಲೈ 13) ಸೆಂಟರ್ ಕೋರ್ಟ್ ಅಂಗಳದಲ್ಲಿ ನಡೆಯಲಿದೆ.