ಗ್ರಾಮದೇವತೆ ಹಬ್ಬದಲ್ಲೂ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಪೈಪೋಟಿ, ರಸಮಂಜರಿ-ಅರೆಬೆತ್ತಲೆ ಕುಣಿತ ಆಯೋಜನೆ!
ಯುವತಿಯರು ಅಶ್ಲೀಲ ಹಾವ ಭಾವ ಪ್ರದರ್ಶಿಸುತ್ತಾ ಕುಣಿಯುತ್ತಿದ್ದಾರೆ, ಜನ ಕೇಕೆ ಹಾಕುತ್ತಾರೆ, ಶಿಳ್ಳೆ ಹೊಡೆಯುತ್ತಾರೆ ಮತ್ತು ಚಪ್ಪಾಳೆ ತಟ್ಟುತ್ತಾರೆ. ಒಬ್ಬ ಹದಿಹರೆಯದ ಬಾಲಕನನ್ನು ವೇದಿಕೆಗೆ ಕರೆತರುವ ಡ್ಯಾನ್ಸರ್ಗಳು ಕೀಳು ಸ್ವರೂಪದ ಗಿಮಿಕ್ ಪ್ರದರ್ಶಿಸುತ್ತಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ತೊಳಸಿಕೊಂಬರಿ (Tolasikombari) ಗ್ರಾಮದೇವತೆ ಹಬ್ಬದಲ್ಲಿ ಎರಡು ಪ್ರಮುಖ ಪಕ್ಷಗಳ ನಡುವಿನ ಪೈಪೋಟಿ, ಜಿದ್ದಾಜಿದ್ದಿ ಯಾವ ಹಂತ ತಲುಪಿದೆ ಅಂದರೆ, ನೋಡುವವರಿಗೆ ರಾಜಕಾರಣ ಈ ಮಟ್ಟಕ್ಕೆ ಇಳಿಯಲು ಸಾಧ್ಯವೇ ಅನಿಸಿಬಿಡುತ್ತದೆ. ಅಸಲಿಗೆ ಊರಿನ ರಾಜಕೀಯ ನಾಯಕರಿಗೆ ಗ್ರಾಮದೇವತೆ ಹಬ್ಬದ ವ್ಯಾಖ್ಯಾನವೇ ಮರೆತಂತಿದೆ. ನಾವು ಕಾಂಗ್ರೆಸ್ (Congress) ಮತ್ತು ಜೆಡಿಎಸ್ (JDS) ಪಕ್ಷಗಳ ನಾಯಕರ ಬಗ್ಗೆ ಮಾತಾಡುತ್ತಿದ್ದೇವೆ. ಹಬ್ಬದ ಪ್ರಯುಕ್ತವಾಗಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ತಮ್ಮ ಬೆಂಬಲಿಗರನ್ನು ಖುಷಿಪಡಿಸಲು ಒಂದು ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಫೇರ್ ಇನಫ್. ಸಾಮಾನ್ಯವಾಗಿ ಗ್ರಾಮದೇವತೆ ಹಬ್ಬದಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ.
ಅದರಲ್ಲಿ ಯಾರಿಗೂ ತಪ್ಪು ಕಾಣದು. ಈ ಕಾರ್ಯಕ್ರಮದಲ್ಲಿ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಭಾಗಿಯಾಗಿದ್ದರು.
ಆದರೆ, ತೊಳಸಿಕೊಂಬರಿ ಗ್ರಾಮದೇವತೆ ಹಬ್ಬದಲ್ಲಿ ಏನಾಗಿದೆ ಅಂತ ಗಮನಿಸಿ ಮಾರಾಯ್ರೇ. ಈ ಊರಲ್ಲಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಎಲ್ಲಾದಕ್ಕೂ ಪ್ರತಿಸ್ಪರ್ಧೆ ನಡೆಯುತ್ತದೆ. ಒಬ್ಬರು ಸೇರಾದರೆ ಮತ್ತೊಬ್ಬರು ಸವ್ವಾಸೇರು. ಒಬ್ಬರು ಚಾಪೆ ಕೆಳಗೆ ತೂರಿದರೆ ಮತ್ತೊಬ್ಬರು ರಂಗೋಲಿ ಕೆಳಗೆ.
ಇದು ಬಹಳ ದಿನಗಳಿಂದ ನಡೆದುಕೊಂಡು ಬಂದಿದೆ. ಅದರ ಮುಂದುವರಿದ ಭಾಗವಾಗೇ ಜೆಡಿಎಸ್ ರಸಮಂಜರಿ ಕಾರ್ಯಕ್ರಮ ಆಯೋಜಿಸಿದರೆ, ಕಾಂಗ್ರೆಸ್ ತನ್ನ ಬೆಂಬಲಿಗರಿಗೆ ಯುವತಿಯರ ಅರೆ ಬೆತ್ತಲೆ ಕುಣಿತದ ಕಾರ್ಯಕ್ರಮವನ್ನು ಆಯೋಜಿಸಿದೆ.
ಯುವತಿಯರು ಅಶ್ಲೀಲ ಹಾವ ಭಾವ ಪ್ರದರ್ಶಿಸುತ್ತಾ ಕುಣಿಯುತ್ತಿದ್ದಾರೆ, ಜನ ಕೇಕೆ ಹಾಕುತ್ತಾರೆ, ಶಿಳ್ಳೆ ಹೊಡೆಯುತ್ತಾರೆ ಮತ್ತು ಚಪ್ಪಾಳೆ ತಟ್ಟುತ್ತಾರೆ. ಒಬ್ಬ ಹದಿಹರೆಯದ ಬಾಲಕನನ್ನು ವೇದಿಕೆಗೆ ಕರೆತರುವ ಡ್ಯಾನ್ಸರ್ಗಳು ಕೀಳು ಸ್ವರೂಪದ ಗಿಮಿಕ್ ಪ್ರದರ್ಶಿಸುತ್ತಾರೆ.
ಕಾಂಗ್ರೆಸ್ ಆಯೋಜಿಸಿದ ಕಾರ್ಯಕ್ರಮಕ್ಕೆ ಮೊದಲು ಜೆಡಿಎಸ್ ನಲ್ಲಿದ್ದು ನಂತರ ಕಾಂಗ್ರೆಸ್ ಸೇರಿದ ಮಾಜಿ ಸಚಿವ ಚೆಲುವರಾಯಸ್ವಾಮಿ ಆಗಮಿಸಿದ್ದಾರೆ. ಅವರಿಗೆ ಬೃಹತ್ ಗಾತ್ರದ ಹಾರ ಹಾಕಿ ಸನ್ಮಾನಿಸಲಾಗುತ್ತದೆ.
ಗ್ರಾಮದೇವತೆ ಹಬ್ಬ, ಊರ ಹಬ್ಬ, ಕೆರೆ ಹಬ್ಬ ಮೊದಲಾದ ಸಂದರ್ಭಗಳಲ್ಲಿ ಊರ ಜನ ಹಿಂದಿನ ವೈಷಮ್ಯಗಳನ್ನು ಮರೆತು ಎಲ್ಲರೂ ಒಂದಾಗಿ ಪಾಲ್ಗೊಳ್ಳುತ್ತಾರೆ. ಅದರೆ, ತೊಳಸಿಕೊಂಬರಿ ಜನ ಗ್ರಾಮದೇವತೆ ಹಬ್ಬವನ್ನು ಬೇರೆ ರೀತಿಯಲ್ಲಿ ಆಚರಿಸುತ್ತಿದ್ದಾರೆ.
ಇದನ್ನೂ ಓದಿ: Viral Video: ನದಿಯಲ್ಲಿ ಹಿಡಿದ ಮೀನನ್ನು ಈಜುತ್ತಾ ದಡಕ್ಕೆ ಎಳೆದು ತಂದ ಹದ್ದು; ಇಲ್ಲಿದೆ ವೈರಲ್ ವಿಡಿಯೋ