ನನ್ನ ಕಲ್ಯಾಣ ಮಂಟಪಕ್ಕೆ ಸಿಗುತ್ತಿರುವ ಪ್ರಚಾರ ಕಂಡು ಖುಷಿಯಾಗುತ್ತಿದೆ ಎಂದ ಶಾಸಕ ಸಾ ರಾ ಮಹೇಶ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 06, 2021 | 9:30 PM

ಹಿಂದೆ, ತಾನು ಮಂತ್ರಿಯಾದಾಗಲೂ ಈ ರೀತಿಯ ಪ್ರಚಾರ ಸಿಕ್ಕಿರಲಿಲ್ಲ ಎಂದ ಅವರು, ‘ರಾಮಾಚಾರಿ’ ಚಿತ್ರದ ಶೂಟಿಂಗ್ ಅಲ್ಲಿ ನಡೆದಾಗ ಅದಕ್ಕೆ ಪ್ರಚಾರ ಸಿಕ್ಕಿತ್ತು, ಈಗ ಅದಕ್ಕಿಂತಲೂ ಹೆಚ್ಚಿನ ಪ್ರಚಾರ ಸಿಗುತ್ತಿದೆ ಎಂದು ನಗುತ್ತಾ ಹೇಳಿದರು.

ಮಾಜಿ ಸಚಿವ ಮತ್ತು ಕೆ ಆರ್ ನಗರದ ಜೆಡಿ (ಎಸ್) ಶಾಸಕ ಸಾ ರಾ ಮಹೇಶ್ ಅವರು ವಿವಾದಗಳನ್ನು ಸೃಷ್ಟಿಸುತ್ತಾರೋ ಅಥವಾ ವಿವಾದಗಳೇ ಅವರ ಬೆನ್ನಟ್ಟುತ್ತವೆಯೋ ಅಂತ ಗೊತ್ತಾಗುತ್ತಿಲ್ಲ. ಮಹೇಶ್ ಅವರು ಮೈಸೂರಿನಲ್ಲಿ ಒಂದದು ಕಲ್ಯಾಣ ಮಂಟಪ ಕಟ್ಟಿಸಿರುವುದು ಅದು ವಿವಾದಕ್ಕೆ ಸಿಲುಕಿರುವುದು ನಿಮಗೆ ಗೊತ್ತಿದೆ. ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮಹೇಶ್ ಅವರು ವಿರುದ್ಧ ಯುದ್ಧವೇ ಸಾರಿದಂತಿತ್ತು. ಅವರ ಎಸ್ ಆರ್ ಕನ್ವೆನ್ಷನ್ ಹಾಲ್ ಅಕ್ರಮವಾಗಿ ರಾಜಾ ಕಾಲುವೆ ಮೇಲೆ ಕಟ್ಟಲಾಗಿದೆ ಅಂತ ಹೇಳಿದ್ದ ಅವರು ಅದರ ಸುತ್ತಮುತ್ತಲಿನ ಸ್ಥಳದ ಸರ್ವೇ ಆಗಬೇಕೆಂದು ಹೇಳಿದ್ದರು. ಅದಾದ ಮೇಲೆ ರೀಜಿನಲ್ ಕಮೀಷನರ್ ಡಾ ಜಿಸಿ ಪ್ರಕಾಶ್ ಅವರು 11-ಸದಸ್ಯರ ಸಮಿತಿಯೊಂದನ್ನು ರಚಿಸಿ ಸರ್ವೇ ಮಾಡಿಸಿದ್ದರು.
ಸದರಿ ಸಮಿತಿಯು ಸರ್ವೇ ನಡೆಸಿದ ನಂತರ ಸಾ ರಾ ಮಹೇಶ್ ಅವರ ಕಟ್ಟಡ ಸರ್ಕಾರೀ ಜಾಗವನ್ನಾಗಲೀ, ರಾಜಾ ಕಾಲುವೆಯನ್ನಾಗಲೀ ಅತಿಕ್ರಮಿಸಿಲ್ಲ ಎಂದು ವರದಿ ನೀಡಿತ್ತು.

ಮೈಸೂರಿನಲ್ಲಿ ತಮ್ಮ ಕಲ್ಯಾಣ ಮಂಟಪದ ಬಗ್ಗೆ ಮಾತಾಡಿದ ಶಾಸಕರು, ಅದಕ್ಕೆ ಪುಕ್ಕಟೆ ಪ್ರಚಾರ ಸಿಗುತ್ತಿದೆ ಎಂದು ಹೇಳಿ ಅಲ್ಲಿ ನೆರೆದಿದ್ದ ಮಾಧ್ಯಮದವರಿಗೆ ಧನ್ಯವಾದಗಳನ್ನು ಹೇಳಿದರು.  ಹಿಂದೆ, ತಾನು ಮಂತ್ರಿಯಾದಾಗಲೂ ಈ ರೀತಿಯ ಪ್ರಚಾರ ಸಿಕ್ಕಿರಲಿಲ್ಲ ಎಂದ ಅವರು, ಯಶ್​ ನಟಿಸಿದ ಚಿತ್ರವೊಂದರ ಶೂಟಿಂಗ್ ಅಲ್ಲಿ ನಡೆದಾಗ ಅದಕ್ಕೆ ಪ್ರಚಾರ ಸಿಕ್ಕಿತ್ತು, ಈಗ ಅದಕ್ಕಿಂತಲೂ ಹೆಚ್ಚಿನ ಪ್ರಚಾರ ಸಿಗುತ್ತಿದೆ ಎಂದು ನಗುತ್ತಾ ಹೇಳಿದರು.

ತನಗೂ ಮಾಧ್ಯಮಗಳಲ್ಲಿ ಕಲ್ಯಾಣ ಮಂಟಪ ನೋಡಲು ಖಷಿಯೆನಿಸುತ್ತಿದೆ ಎಂದು ಅವರು ಹೇಳಿದರು.