ರಾಜ್ಯೋತ್ಸವದಂದು ಬೆಳಗಾವಿಯಲ್ಲಿ ಎಮ್ಈಎಸ್ ಕರಾಳ ದಿನ ಆಚರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದ ಕನ್ನಡ ಕೂಟಗಳು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 28, 2021 | 8:02 PM

ಅಸಲಿಗೆ ಮಹಾರಾಷ್ಟ್ರನಲ್ಲಿ ಅಧಿಕಾರದಲ್ಲಿರುವ ಶಿವ ಸೇನೆಯು ಎಮ್ ಈ ಎಸ್ ಸದಸ್ಯರನ್ನು ಪ್ರಚೋದಿಸುತ್ತಿದೆ. ಅದರ ಬೆಂಬಲ ಇಲ್ಲಿರುವವರಿಗೆ ರೆಕ್ಕೆ ಕಟ್ಟಿದಂತಾಗಿದೆ

1966 ರಲ್ಲೇ ನ್ಯಾಯಮೂರ್ತಿ ಮಹಾಜನ್ ನೇತೃತ್ವದ ಆಯೋಗವು ಬೆಳಗಾವಿ (ಆಗಿನ ಬೆಳಗಾಂ) ಕರ್ನಾಟಕದ ಭಾಗ ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಬೆಳಗಾವಿಯಲ್ಲಿ ಮರಾಠಿ ಮಾತಾಡುವ ಕೆಲ ಅವಿವೇಕಿ ಜನರಿಗೆ ತಮ್ಮೊಂದಿಗೆ ಬೆಳಗಾವಿಯೂ ಮಹಾರಾಷ್ಟ್ರಕ್ಕೆ ಸೇರಬೇಕು ಅಂತ ದಶಕಗಳಿಂದ ಅನಿಸುತ್ತಿದೆ. ಅಷ್ಟಾಗಿಯೂ ಬೆಳಗಾವಿಯ ವಿಶಾಲ ಹೃದಯದ ಕನ್ನಡಿಗರು ಅವರ ಉದ್ಧಟತನವನ್ನು ಅಸಡ್ಡೆ ಮಾಡಿ ತಮ್ಮೊಂದಿಗೆ ಸಹಬಾಳ್ವೆ ನಡೆಸುವ ಅವಕಾಶ ಕಲ್ಪಿಸಿದ್ದಾರೆ ಮತ್ತು ಅವರೊಂದಿಗೆ ಸೌಹಾರ್ದಯುತವಾದ ಬಾಂಧವ್ಯ ಕಾಯ್ದುಕೊಂಡಿದ್ದಾರೆ. ಆದರೆ, ಕನ್ನಡಿಗರ ಸ್ನೇಹಶೀಲತೆ, ಪ್ರೀತಿ-ವಾತ್ಸಲ್ಯ, ಉದಾರ ಮನೋಭಾವ ಮತ್ತು ತಾಳ್ಮೆಯನ್ನು ಮರಾಠಿಗರು ದೌರ್ಬಲ್ಯವೆಂದು ಭಾವಿಸಿದಂತಿದೆ. ಹಾಗಾಗೇ, ಪ್ರತಿ ಬಾರಿ ಕನ್ನಡಿಗರು ರಾಜ್ಯೋತ್ಸವ ಆಚರಿಸುವಾಗ ಇವರು ಬೆಳಗಾವಿಯಲ್ಲಿ ಕರಾಳ ದಿನ ಆಚರಿಸಲು ಮುಂದಾಗುತ್ತಾರೆ.

ಅವರು ಹಾಗೆ ಮಾಡಿದಾಗೆಲ್ಲ ಕನ್ನಡಿಗರು ತಕ್ಕ ಪಾಠ ಕಲಿಸಿದ್ದಾರೆ. ಈಗ ಬೆಳಗಾವಿಯ ಮರಾಠಿ ಮಾತಾಡುವ ಕುಟುಂಬಗಳಲ್ಲಿ ಅದೇ ಗುಸುಗುಸು ಕೇಳಿಬರುತ್ತಿದೆ. ಈ ಸಲವೂ ಕರಾಳ ದಿನ ಆಚರಿಸಲು ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರು ಮರಾಠಿ ಜನರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದಿಸುತಿದ್ದಾರೆ. ಈ ಸಂಗತಿಯು ಬೆಳಗಾವಿ ಕನ್ನಡ ಕೂಟ ಮತ್ತು ಕನ್ನಡಪರ ಸಂಘಟನೆಗಳಿಗೆ ಗೊತ್ತಾಗಿದೆ. ಹಾಗಾಗಿ ಬೆಳಗಾವಿ ಕನ್ನಡ ಕೂಟದ ಸದಸ್ಯರು ಎಮ್ ಈ ಎಸ್ ಪುಂಡರಿಗೆ ಹದ್ದುಬಸ್ತಿನಲ್ಲಿರುವಂತೆ ಎಚ್ಚರಿಕೆ ನೀಡುತ್ತಿದ್ದಾರೆ.

ಇಲ್ಲಿರುವ ವಿಡಿಯೋವನ್ನೊಮ್ಮೆ ಗಮನಿಸಿ ಮತ್ತು ಈ ಯುವಕ ಹೇಳುತ್ತಿರುವುದನ್ನು ಆಲಿಸಿ. ಕನ್ನಡ ರಾಜ್ಯೋತ್ಸವದಂದು ಯಾವುದೇ ರೀತಿಯ ಅತಿರೇಕತನ ಪ್ರದರ್ಶಿಸದಂತೆ ಅವರು ಎಮ್ ಈ ಎಸ್ ಗೆ ನೇರವಾಗಿ ಎಚ್ಚರ ನೀಡುತ್ತಿದ್ದಾರೆ. ಪುಂಡಾಟ ನಡೆಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಅಂತಲೂ ಅವರು ಹೇಳುತ್ತಿದ್ದಾರೆ.

ಅಸಲಿಗೆ ಮಹಾರಾಷ್ಟ್ರನಲ್ಲಿ ಅಧಿಕಾರದಲ್ಲಿರುವ ಶಿವ ಸೇನೆಯು ಎಮ್ ಈ ಎಸ್ ಸದಸ್ಯರನ್ನು ಪ್ರಚೋದಿಸುತ್ತಿದೆ. ಅದರ ಬೆಂಬಲ ಇಲ್ಲಿರುವವರಿಗೆ ರೆಕ್ಕೆ ಕಟ್ಟಿದಂತಾಗಿದೆ. ಆದರೆ ಬೆಳಗಾವಿ ಕನ್ನಡಿಗರು ಅವರ ರೆಕ್ಕೆಗಳೊಂದಿಗೆ ಪುಕ್ಕಗಳನ್ನೂ ಕತ್ತರಿಸುವ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:   ಕನ್ನಡ ರಾಜ್ಯೋತ್ಸವ ಆಚರಣೆಗೆ ಕೊವಿಡ್ ತಾಂತ್ರಿಕ ಸಲಹಾ ಸಮಿತಿಯಿಂದ ನಿಯಮ ಶಿಫಾರಸು; ಏನೇನಿದೆ ನಿಯಮಗಳು?