ಸಂಪುಟ ಪುನಾರಚನೆ ಬಗ್ಗೆ ಮತ್ತೆ ಸಿಎಂ ಸಿದ್ದರಾಮಯ್ಯ ಸುಳಿವು

Updated on: Nov 05, 2025 | 9:31 AM

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಪುನಾರಚನೆ ಬಗ್ಗೆ ಮತ್ತೆ ಸುಳಿವು ನೀಡಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಸಂಪುಟ ಸರ್ಜರಿ ಸಂದರ್ಭದಲ್ಲಿ ಸಚಿವ ಸ್ಥಾನ ಹಂಚಿಕೆ ಕುರಿತು ಪರಿಶೀಲಿಸುವುದಾಗಿ ತಿಳಿಸಿದರು. ಯತ್ತಿನಹೊಳೆ ಯೋಜನೆ ಎರಡು ವರ್ಷದಲ್ಲಿ ಪೂರ್ಣಗೊಳ್ಳುವ ಭರವಸೆ ನೀಡಿದ ಅವರು, ಅನುದಾನ ವಿವಾದದ ಬಗ್ಗೆ ಜೆಡಿಎಸ್​ಗೆ ತಿರುಗೇಟು ನೀಡಿದರು.

ಕೋಲಾರ, ನವೆಂಬರ್ 5: ಸಚಿವ ಸಂಪುಟ ಪುನಾರಚನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸುಳಿವು ನೀಡಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಜಿಲ್ಲೆಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಕುರಿತು ಮಾತನಾಡಿ, ಸಂಪುಟ ಪುನಾರಚನೆ ವೇಳೆ ನೋಡೋಣ ಎಂದು ಹೇಳಿದರು. ನಾಲ್ಕು ಮಂದಿ ಶಾಸಕರನ್ನು ಹೊಂದಿರುವ ಜಿಲ್ಲೆಗೆ ಸಚಿವ ಸ್ಥಾನದ ಬೇಡಿಕೆ ಕುರಿತು ಪರಿಶೀಲಿಸಲಾಗುವುದು ಎಂದರು. ಇದೇ ವೇಳೆ, ಯತ್ತಿನಹೊಳೆ ಯೋಜನೆ ಎರಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಅನುದಾನ ಬಿಡುಗಡೆ ಕುರಿತು ಜೆಡಿಎಸ್ ಶಾಸಕರೊಬ್ಬರು ನ್ಯಾಯಾಲಯದ ಮೊರೆ ಹೋಗಿರುವ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯನ್ನು ನೆನಪಿಸಿದರು. ಜೆಡಿಎಸ್‌ನವರು ಎಷ್ಟು ಅನುದಾನ ನೀಡಿದ್ದರು? ಅವರು ಸಿಎಂ ಆಗಿದ್ದಾಗ ರಮೇಶ್ ಕುಮಾರ್ ಅವರ ಶ್ರೀನಿವಾಸಪುರ ಕ್ಷೇತ್ರಕ್ಕೆ ಎಷ್ಟು ಅನುದಾನ ಕೊಟ್ಟಿದ್ದರು? ಎಂದು ಪ್ರಶ್ನಿಸುವ ಮೂಲಕ ಜೆಡಿಎಸ್​ಗೆ ತಿರುಗೇಟು ನೀಡಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ