ಭೂ ದಾಖಲೆಗಾಗಿ ಪರದಾಟ: ಕೊರೆಯುವ ಚಳಿಯಲ್ಲಿ ಗೋಣಿಚೀಲ ಹೊದ್ದು ತಹಶೀಲ್ದಾರ್ ಕಚೇರಿ ಗೇಟ್ ಬಳಿಯೇ ಮಲಗಿದ ರೈತ!
ತುಮಕೂರಿನ ಮಧುಗಿರಿ ತಹಶೀಲ್ದಾರ್ ಕಚೇರಿಯಲ್ಲಿ ರೈತ ನಾಗರಾಜ್ ಭೂ ದಾಖಲೆಗಳಿಗಾಗಿ ಕಾಯುತ್ತಾ ಸಂಜೆ ಮನೆಗೆ ತೆರಳಲಾಗದೆ ಕಚೇರಿ ಗೇಟ್‌ನಲ್ಲೇ ರಾತ್ರಿ ಕಳೆದರು. ತಹಶೀಲ್ದಾರ್ ನಂದಿನಿ ವಿಷಯ ತಿಳಿದು ತಡರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಊಟ, ಆಶ್ರಯ ಒದಗಿಸಿ, ದಾಖಲೆಗಳನ್ನು ನೀಡುವ ಭರವಸೆ ನೀಡಿದರು.
ತುಮಕೂರು, ನವೆಂಬರ್ 20: ಜಿಲ್ಲೆಯ ಮಧುಗಿರಿ ತಹಶೀಲ್ದಾರ್ ಕಚೇರಿಯಲ್ಲಿ ಬಗರ್ ಹುಕುಂಗೆ ಸಂಬಂಧಿಸಿದ ಭೂ ದಾಖಲೆಗಳಿಗಾಗಿ ರೈತ ನಾಗರಾಜ್ ಅವರು ಪರದಾಡಿದ್ದಾರೆ. ಬೆಳಗ್ಗೆ ಕಚೇರಿಗೆ ಬಂದ ನಾಗರಾಜ್‌ಗೆ ಸಂಜೆ ವೇಳೆಗೆ ದಾಖಲೆಗಳನ್ನು ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಸಂಜೆ ಎಂಟು ಗಂಟೆಯಾದರೂ ದಾಖಲೆಗಳು ದೊರೆಯಲಿಲ್ಲ.
ಸೂರ್ಯಾಸ್ತದ ನಂತರ ಊರಿಗೆ ತೆರಳಲು ಬಸ್ಸುಗಳು ಸಿಗದ ಕಾರಣ, ಮಧುಗಿರಿ ತಹಶೀಲ್ದಾರ್ ಕಚೇರಿ ಗೇಟ್‌ನ ಹೊರಗಡೆಯೇ ರಾತ್ರಿ ಕಳೆಯುವ ಅನಿವಾರ್ಯತೆ ರೈತ ನಾಗರಾಜ್ ಅವರಿಗೆ ಎದುರಾಯಿತು. ಚಳಿಯನ್ನೂ ಲೆಕ್ಕಿಸದೆ ಗೋಣಿಚೀಲ ಹೊದ್ದು ಅಲ್ಲೇ ಮಲಗಿದ್ದರು. ರೈತ ಮಲಗಿರುವ ವಿಷಯ ತಿಳಿದ ತಹಶೀಲ್ದಾರ್ ನಂದಿನಿ ಅವರು ತಡರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರೈತ ನಾಗರಾಜ್‌ಗೆ ಊಟ ತರಿಸಿಕೊಟ್ಟ ಅವರು, ಕಚೇರಿಯೊಳಗೇ ಮಲಗಲು ವ್ಯವಸ್ಥೆ ಕಲ್ಪಿಸಿದರು ಮತ್ತು ದಾಖಲೆಗಳನ್ನು ನೀಡುವ ಭರವಸೆ ನೀಡಿದರು. ರಾತ್ರಿ ಕಚೇರಿಯಲ್ಲಿ ಮಲಗಿದ್ದ ರೈತ ಮರುದಿನ ಬೆಳಗ್ಗೆ ಮನೆಗೆ ತೆರಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
