ಆಡಳಿತ ಯಂತ್ರಕ್ಕೆ ಚುರಕು ನೀಡಲು ಸಿಎಂ ಡಿಕೆಶಿ ಕ್ರಮ: 87 ಕೆಎಎಸ್ ಅಧಿಕಾರಿಗಳ ವರ್ಗಾವಣೆಗೆ ಆದೇಶ
ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸಲು ಮತ್ತು ಸರ್ಕಾರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 87 ಕೆಎಎಸ್ ಅಧಿಕಾರಿಗಳನ್ನು ವರ್ಗಾಯಿಸಲು ಆದೇಶಿಸಿದ್ದಾರೆ. ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ವೇಗ ಮತ್ತು ಪಾರದರ್ಶಕತೆಯನ್ನು ತರುವ ಉದ್ದೇಶದಿಂದ, ನಗರ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಬೆಂಗಳೂರು, ಅಕ್ಟೋಬರ್ 29: ರಾಜ್ಯದ ಆಡಳಿತ ಯಂತ್ರಕ್ಕೆ ಮತ್ತಷ್ಟು ಚುರುಕು ನೀಡುವ ಹಾಗೂ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ಮಹತ್ವದ ಕ್ರಮವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ 87 ಮಂದಿ ಕೆಎಎಸ್ ಅಧಿಕಾರಿಗಳನ್ನು ವರ್ಗಾಯಿಸಲು ಆದೇಶಿಸಿದ್ದಾರೆ. ಈ ಕುರಿತು ಸಿಎಂ ಕಚೇರಿಯಿಂದ ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ವರ್ಗಾವಣೆಗೊಂಡ ಅಧಿಕಾರಿಗಳಲ್ಲಿ 9 ಉಪ ವಿಭಾಗಾಧಿಕಾರಿಗಳು ಮತ್ತು ನಾಲ್ವರು ಹೆಚ್ಚುವರಿ ಜಿಲ್ಲಾಧಿಕಾರಿಗಳು ಸೇರಿದ್ದಾರೆ. ನಗರಾಭಿವೃದ್ಧಿ ಇಲಾಖೆಗೆ 15 ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 13 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಉಳಿದ ಅಧಿಕಾರಿಗಳನ್ನು ಪ್ರಮುಖ ಇಲಾಖೆಗಳು ಮತ್ತು ಆಡಳಿತಾತ್ಮಕ ಹುದ್ದೆಗಳಿಗೆ ನಿಯೋಜಿಸಲು ಸೂಚಿಸಲಾಗಿದೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ, ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ದಕ್ಷತೆಯನ್ನು ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ತಿಳಿಸಿದ್ದಾರೆ. ಜಿಲ್ಲೆ ಮತ್ತು ಉಪ ವಿಭಾಗದ ಮಟ್ಟದಲ್ಲಿ ಆಡಳಿತ ಸುಧಾರಣೆಗೆ ಒತ್ತು ನೀಡಲಾಗಿದ್ದು, ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಆಗುವ ವಿಳಂಬವನ್ನು ತಪ್ಪಿಸಿ, ಜನರಿಗೆ ತ್ವರಿತ ಸೇವೆಗಳನ್ನು ಒದಗಿಸುವುದು ಈ ಬದಲಾವಣೆಯ ಪ್ರಮುಖ ಗುರಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
