ಉನ್ನತ ಶಿಕ್ಷಣ ಸಚಿವರಿಂದ ಗುಡ್ನ್ಯೂಸ್; ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಕರ್ನಾಟಕದ ವಿಶ್ವವಿದ್ಯಾಲಯಗಳ ಪ್ರಗತಿ ಮತ್ತು ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಿದರು. ಯಾವುದೇ ವಿಶ್ವವಿದ್ಯಾಲಯದಲ್ಲಿ ಹಣಕಾಸಿನ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಮೈಸೂರು ವಿಶ್ವವಿದ್ಯಾಲಯದ ಪಿಂಚಣಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು. ಸಾವಿರಾರು ಖಾಲಿ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡುವುದಾಗಿ ಅವರು ಭರವಸೆ ನೀಡಿದರು.
ಉನ್ನತ ಶಿಕ್ಷಣ ಸಚಿವ ಬಸವರಾಯ ರೆಡ್ಡಿ ಅವರು ರಾಜ್ಯದ ವಿಶ್ವವಿದ್ಯಾಲಯಗಳ ಪ್ರಗತಿ ಮತ್ತು ಆರ್ಥಿಕ ಸ್ಥಿತಿ ಕುರಿತು ಸಭೆ ನಡೆಸಿ, ಮೈಸೂರಿನಲ್ಲಿ ಟಿವಿ9ಗೆ ಮಾಹಿತಿ ನೀಡಿದರು. ತಾವು ಅಧಿಕಾರ ವಹಿಸಿಕೊಂಡ 45 ದಿನಗಳಲ್ಲಿ, ಹತ್ತು ದಿನಗಳ ಕಾಲ ಉನ್ನತ ಶಿಕ್ಷಣ ಇಲಾಖೆಗೆ ಸಮಯ ನೀಡಿದ್ದು, ಈಗಾಗಲೇ ಎರಡು ಬಾರಿ ಉಪಕುಲಪತಿಗಳ ಸಭೆ ನಡೆಸಿರುವುದಾಗಿ ತಿಳಿಸಿದರು. ವಿಶ್ವವಿದ್ಯಾಲಯಗಳಲ್ಲಿ ಹಣಕಾಸಿನ ಕೊರತೆ ಇಲ್ಲ ಎಂಬುದನ್ನು ಸಚಿವರು ಸ್ಪಷ್ಟಪಡಿಸಿದರು. ಚಾಮರಾಜನಗರ ವಿಶ್ವವಿದ್ಯಾಲಯ 4 ಕೋಟಿ, ಕೊಡಗು ವಿಶ್ವವಿದ್ಯಾಲಯ 4 ಕೋಟಿ ಹಾಗೂ ಹಾಸನ ವಿಶ್ವವಿದ್ಯಾಲಯ 30 ಕೋಟಿ ಹೆಚ್ಚುವರಿ ಹಣ ಹೊಂದಿದೆ ಎಂದು ವಿವರಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ 71 ಕೋಟಿ ರೂಪಾಯಿ ಪಿಂಚಣಿ ಸಮಸ್ಯೆ ಇದ್ದು, ಇದನ್ನು ಸರ್ಕಾರದ ಮಟ್ಟದಲ್ಲಿ ಪರಿಹರಿಸುವುದಾಗಿ ಭರವಸೆ ನೀಡಿದರು. ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಯಿಂದ ಆದ ಆರ್ಥಿಕ ಅಸಮತೋಲನವನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳನ್ನು, ವಿಶೇಷವಾಗಿ ಪ್ರೊಫೆಸರ್ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲು ಗಂಭೀರ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಯರೆಡ್ಡಿ ತಿಳಿಸಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

