ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿತ; ಚೂರಲ್​​​ಮಲೆಯಲ್ಲಿ ಕೊಚ್ಚಿ ಹೋದ ಶಾಲೆ

Updated on: Jul 30, 2024 | 3:44 PM

ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಗುಡ್ಡ ಕುಸಿದು ಸಂಭವಿಸಿದ ದುರಂತದಲ್ಲಿ 50ಕ್ಕಿಂತಲೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಇಲ್ಲಿನ ಚೂರಲ್‌ಮಲ ಮತ್ತು ಮುಂಡಕೈ ಪ್ರದೇಶದಲ್ಲಿ ಗುಡ್ಡ ಕುಸಿದ್ದು, ಇಡೀ ಪ್ರದೇಶವೇ ನೆಲಸಮವಾಗಿದೆ. ಮರ, ಮನೆ ಕುಸಿದು ಬಿದ್ದಿದ್ದು ಪ್ರಾಣಹಾನಿ ಜತೆಗೆ ಹಲವಾರು ನಾಶ ನಷ್ಟ ಸಂಭವಿಸಿದೆ.

ಮನುಷ್ಯನಿಗಿಂತ ಎತ್ತರದ ಬೃಹತ್ ಬಂಡೆಗಳು, ಕುಸಿದ ಕಟ್ಟಡಗಳು, ಸುತ್ತಲೂ ಮಣ್ಣು, ಕೆಸರುಮಯ.. ರಭಸದಲ್ಲಿ ಮುನ್ನುಗ್ಗುತ್ತಿರುವ ಪ್ರವಾಹ. ಕೇರಳದ ವಯನಾಡಿನ ಚೂರಲ್‌ಮಲ ಮತ್ತು ಮುಂಡಕೈ ಪ್ರದೇಶದಲ್ಲಿ ಗುಡ್ಡ ಕುಸಿದು ಸಂಭವಿಸಿದ ದುರಂತದಲ್ಲಿ 50ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಸುಮಾರು 250 ಮಂದಿ ಸಿಲುಕಿದ್ದಾರೆ. ರಾಜ್ಯ ಹಿಂದೆಂದೂ ಕಂಡರಿಯದ ಸಂಕಷ್ಟದ ಸ್ಥಿತಿಯಲ್ಲಿದೆ. ದುರಂತ ಸ್ಥಳದಿಂದ ಮೃತದೇಹಗಳು ಚಾಲಿಯಾರ್ ನದಿ ಮೂಲಕ ಸಮೀಪದ ಜಿಲ್ಲೆ ಮಲಪ್ಪುರಂಗೆ ಕೊಚ್ಚಿ ಹೋಗಿದೆ. ರಕ್ಷಣಾ ಸಿಬ್ಬಂದಿಗೆ ಇನ್ನೂ ದುರಂತದ ಸ್ಥಳಕ್ಕೆ ತಲುಪಲು ಸಾಧ್ಯವಾಗಿಲ್ಲ.

ಚೂರಲ್‌ಮಲದಿಂದ ಮುಂಡಕೈಗೆ ಹೋಗುವ ಸೇತುವೆ ಕೊಚ್ಚಿ ಹೋಗಿರುವುದರಿಂದ ಅಲ್ಲಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಪ್ರದೇಶವು ಪ್ರತ್ಯೇಕವಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ ವಾಯುಪಡೆಯು ಸೂಲೂರಿನಿಂದ ಎರಡು ಹೆಲಿಕಾಪ್ಟರ್‌ಗಳನ್ನು ಕಳುಹಿಸಿದೆ, ಆದರೆ ಪ್ರತಿಕೂಲ ಹವಾಮಾನವು ಏರ್‌ಲಿಫ್ಟಿಂಗ್‌ಗೆ ಬಿಕ್ಕಟ್ಟು ಸೃಷ್ಟಿಸುತ್ತಿದೆ. ಮುಂಡಕೈ ಒಂದರಲ್ಲೇ ಸುಮಾರು 100 ಕುಟುಂಬಗಳು ದುರಂತಕ್ಕೆ ಸಿಲುಕಿವೆ. ಸಿಕ್ಕಿಬಿದ್ದವರಲ್ಲಿ ವಿದೇಶಿಗರೂ ಇರುವ ಶಂಕೆ ಇದೆ. ಚೂರಲ್‌ಮಲದಲ್ಲಿ ಶಾಲೆಯೊಂದು ಮಳೆ ನೀರಿಗೆ ಕೊಚ್ಚಿ ಹೋಗಿದೆ.

ಭೂಕುಸಿತದಿಂದ ಸೇತುವೆ ಕುಸಿದರೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಸೇನೆಯ ಎಂಜಿನಿಯರಿಂಗ್ ಗುಂಪು ವಯನಾಡ್‌ಗೆ ಆಗಮಿಸಲಿದೆ. ಬೆಂಗಳೂರಿನಿಂದ ತಂಡ ಆಗಮಿಸುವ ಮೂಲಕ ಈ ಭಾಗದ ಜತೆಗಿನ ಸಂಬಂಧವನ್ನು ಮರುಸ್ಥಾಪಿಸಲು ಹಾಗೂ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಬಹುದು ಎಂಬ ನಿರೀಕ್ಷೆ ಇದೆ. ವಯನಾಡ್ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Read More