IND vs NZ: ರಾಹುಲ್ ತಮ್ಮ ಶತಕವನ್ನು ಈ ರೀತಿ ಆಚರಿಸುವುದೇಕೆ? ಇದರ ಹಿಂದಿದೆ ಕಾರಣ
KL Rahul's Heroic Rajkot Century: ಕೆಎಲ್ ರಾಹುಲ್ ರಾಜ್‌ಕೋಟ್‌ನಲ್ಲಿ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿ, ಭರ್ಜರಿ ಅಜೇಯ ಶತಕ ಬಾರಿಸಿದರು. ಇದು ರಾಜ್‌ಕೋಟ್‌ನಲ್ಲಿ ಭಾರತೀಯ ಆಟಗಾರನ ಮೊದಲ ಏಕದಿನ ಶತಕ. ಸಿಕ್ಸರ್ ಮೂಲಕ ಶತಕ ಪೂರೈಸಿದ ರಾಹುಲ್, ತಮ್ಮ ವಿಶೇಷ ಸಂಭ್ರಮಾಚರಣೆಯನ್ನು ಮಗಳಿಗೆ ಸಮರ್ಪಿಸಿದರು. ಅವರ ಈ ವೈರಲ್ ಸಂಭ್ರಮವು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಗಳಿದೆ.
ಟೀಂ ಇಂಡಿಯಾ ಸಂಕಷ್ಟದಲ್ಲಿದ್ದಾಗಲೆಲ್ಲ ತಂಡಕ್ಕೆ ನೆರವಾಗುವ ಆಟಗಾರರ ಪಟ್ಟಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಕೂಡ ಒಬ್ಬರು. ಇದಕ್ಕೆ ಉದಾಹರಣೆ ಎಂಬಂತೆ ರಾಜ್‌ಕೋಟ್ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 112 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಕ್ರೀಸ್ಗೆ ಬಂದ ಕೆಎಲ್ ರಾಹುಲ್ ಭರ್ಜರಿ ಶತಕ ಬಾರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಇದೀಗ ಶತಕದ ಬಳಿಕ ರಾಹುಲ್ ಮಾಡಿದ ಸಂಭ್ರಮಾಚರಣೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಿಕ್ಸರ್ ಬಾರಿಸುವ ಮೂಲಕ ತಮ್ಮ 8ನೇ ಏಕದಿನ ಶತಕ ಪೂರೈಸಿದ ಕೆಎಲ್ ರಾಹುಲ್ ತಮ್ಮ ಹೆಲ್ಮೆಟ್ ತೆಗೆದು, ಬ್ಯಾಟ್ ಮೇಲಕ್ಕೆ ಎತ್ತಿ, ಬೆರಳು ಚೀಪುವ ರೀತಿಯಲ್ಲಿ ಸನ್ನೆ ಮಾಡಿದರು. ಕೆಎಲ್ ರಾಹುಲ್ ಈ ಹಿಂದೆಯೂ ಈ ರೀತಿಯ ಸಂಭ್ರಮಾಚರಣೆ ಮಾಡಿದ್ದರು. ರಾಹುಲ್ ಅವರ ಈ ಶೈಲಿಯ ಸಂಭ್ರಮಾಚರಣೆಗೆ ಕಾರಣವೂ ಇದ್ದು, ಇತ್ತೀಚೆಗೆ ಜನಿಸಿದ ತಮ್ಮ ಮಗಳಿಗೆ ಈ ಶತಕವನ್ನು ಅರ್ಪಿಸುವ ಮೂಲಕ ಅವರನ್ನು ನೆನಪಿಸಿಕೊಳ್ಳುತ್ತಾರೆ.
ಶತಲದ ಮೂಲಕ ರಾಹುಲ್, ರಾಜ್‌ಕೋಟ್‌ನಲ್ಲಿ ಏಕದಿನ ಶತಕ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರೋಹಿತ್ ಮತ್ತು ವಿರಾಟ್ ಕೊಹ್ಲಿ ಕೂಡ ಈ ಮೈದಾನದಲ್ಲಿ ಎಂದಿಗೂ ಶತಕ ಗಳಿಸಿಲ್ಲ. ರಾಹುಲ್ ತಮ್ಮ ಅತ್ಯುತ್ತಮ ಏಕದಿನ ಸ್ಕೋರ್, ಅಜೇಯ 112 ರನ್ ದಾಖಲಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 5 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ರಾಹುಲ್ 64.21 ರ ಸರಾಸರಿ ಮತ್ತು 100 ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಕೆ.ಎಲ್. ರಾಹುಲ್ ಅವರ ಶತಕದಿಂದಾಗಿ, ಟೀಂ ಇಂಡಿಯಾ 50 ಓವರ್‌ಗಳಲ್ಲಿ 284 ರನ್‌ಗಳನ್ನು ಗಳಿಸಿತು. ರಾಹುಲ್, ಜಡೇಜಾ ಮತ್ತು ರೆಡ್ಡಿ ಅವರೊಂದಿಗೆ ಅರ್ಧಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ಶುಭಮನ್ ಗಿಲ್ ಕೂಡ 56 ರನ್‌ಗಳ ಕಾಣಿಕೆ ನೀಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ