Kodi Mutt Swamiji: ರಾಜ್ಯ ರಾಜಕೀಯದ ಬಗ್ಗೆ ಕೋಡಿಮಠ ಶ್ರೀ ಮಾರ್ಮಿಕ ಮಾತು, ವಿಡಿಯೋ ನೋಡಿ

|

Updated on: Jul 30, 2024 | 1:02 PM

ದೇಶಕ್ಕೆ ದೊಡ್ಡ ಗಂಡಾಂತರ ಕಾದಿದೆ ಎಂದು ಜೂನ್​​ನಲ್ಲಿ ಭವಿಷ್ಯ ನುಡಿದಿದ್ದ ಕೋಡಿಮಠ ಶ್ರೀ ಇದೀಗ ತಮ್ಮ ಭವಿಷ್ಯ ನಿಜವಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯ ರಾಜಕಾರಣದ ಬಗ್ಗೆ ಮತ್ತೆ ಮಾರ್ಮಿಕವಾಗಿ ಮಾತನಾಡಿದ್ದಾರೆ. ಹಾಗಾದರೆ ಕರ್ನಾಟಕ ರಾಜಕಾರಣದ ಬಗ್ಗೆ ಕೋಡಿಮಠ ಶ್ರೀ ಹೇಳಿದ್ದೇನು? ವಿಡಿಯೋ ಇಲ್ಲಿದೆ ನೋಡಿ.

ಬೆಳಗಾವಿ, ಜುಲೈ 30: ಕಳೆದ ತಿಂಗಳಷ್ಟೇ ದೇಶಕ್ಕೆ ದೊಡ್ಡ ಗಂಡಾಂತರ ಕಾದಿದೆ ಎಂದು ಭವಿಷ್ಯ ನುಡಿದಿದ್ದ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿಯಲ್ಲಿರುವ ಕೋಡಿಮಠದ ಡಾ. ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ, ಇದೀಗ ತಾವು ಹೇಳಿದಂತೆ ಆಗಿದೆ ಎಂದಿದ್ದಾರೆ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಹಾಗೂ ಕೇರಳದಲ್ಲಿ ಸಂಭವಿಸಿದ ದುರಂತದ ಬಗ್ಗೆ ಅವರು ಮಾತನಾಡಿದ್ದಾರೆ. ಜತೆಗೆ ರಾಜ್ಯ ರಾಜಕಾರಣದ ಬಗ್ಗೆಯೂ ಮಾರ್ಮಿಕವಾಗಿ ಮಾತನಾಡಿದ್ದಾರೆ.

ರಾಜ್ಯ ರಾಜಕಾರಣದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒಬ್ಬ ಸನ್ಯಾಸಿ ತಪಸ್ಸಿಗೆ ಕುಳಿತಿದ್ದನಂತೆ. ಅದೇ ವೇಳೆ ಒಬ್ಬ ಬೇಡ ಜಿಂಕೆಯನ್ನು ಅಟ್ಟಿಸಿಕೊಂಡು ಬಂದನಂತೆ. ಸನ್ಯಾಸಿ ಬಳಿ ಬಂದು, ‘ಏನ್ ಸ್ವಾಮಿ ಇಲ್ಲಿ ಜಿಂಕೆ ಓಡಿಹೋಯಿತೇ’ ಎಂದು ಪ್ರಶ್ನಿಸಿದನಂತೆ. ಸನ್ಯಾಸಿ ಉಭಯ ಸಂಕಟಕ್ಕೆ ಬಿದ್ದ. ಹೌದು ಎಂದರೆ ಜಿಂಕೆಯನ್ನು ಕೊಲ್ಲುವಂತೆ ಮಾಡಿದ ಪಾಪ ಬರುತ್ತದೆ. ಅಲ್ಲ ಎಂದರೆ ಸುಳ್ಳಾಡಿದ ಪಾಪ ಬರುತ್ತದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಆತ, ‘ಯಾವುದು ನೋಡಿತೋ ಅದು ಮಾತನಾಡಲ್ಲ. ಯಾವುದು ಮಾತನಾಡುತ್ತದೆಯೋ ಅದು ನೋಡಿಲ್ಲ’ ಎಂದನಂತೆ. ಕಣ್ಣು ನೋಡುತ್ತದೆ ಆದರೆ ಮಾತನಾಡಲ್ಲ. ಬಾಯಿ ಮಾತನಾಡುತ್ತದೆ ಆದರೆ ನೋಡಲ್ಲ ಎಂದರು.

ಇದೇ ರೀತಿ ಈ ರಾಜಕಾರಣಿಗಳ ವಿಚಾರ ಮಾತನಾಡುವಾಗಲೂ ನಾವು ಬಹಳ ಎಚ್ಚರದಿಂದ ಇರಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ: ಮತ್ತೊಂದು ಆಘಾತಕಾರಿ ಭವಿಷ್ಯ ನುಡಿದ ಕೋಡಿಮಠ ಶ್ರೀ: ಸಿದ್ದರಾಮಯ್ಯ ಸರ್ಕಾರಕ್ಕೆ ಶುಭ ಸೂಚನೆ

ರಾಷ್ಟ್ರ ರಾಜಕಾರಣದ ಬಗ್ಗೆಯೂ ತಾವು ಹಿಂದೆ ನುಡಿದಿದ್ದ ಭವಿಷ್ಯವನ್ನು ನೆಪಿಸಿಕೊಂಡರು. ಮಹಾಭಾರತದ ಚಕ್ರವ್ಯೂಹದ ಕಥೆಯನ್ನು ಉಲ್ಲೇಖಿಸಿ ಒಂದು ವಿಚಾರ ಹೇಳಿದ್ದೆ. ವೀರನಾಗಿದ್ದ ಅಭಿಮನ್ಯುವನ್ನು ಕರ್ಣ ಎಲ್ಲ ಸೇರಿ ಮೋಸದಿಂದ ಕೊಂದಿದ್ದರು. ಮಹಾಭಾರತದಲ್ಲಿ ಕೃಷ್ಣ ಇದ್ದ ಅಂತ ಭೀಮ ಗೆದ್ದ, ದುರ್ಯೋಧನ ಸೋತ. ಇಲ್ಲಿ ಕೃಷ್ಣ ಇಲ್ಲ. ದುರ್ಯೋಧನ ಗೆಲ್ಲುತ್ತಾನೆ, ಭೀಮ ಸೋಲುತ್ತಾನೆ ಎಂದಿದ್ದೆ ಎಂದು ಅವರು ನೆನಪಿಸಿಕೊಂಡರು.

‘ಸಿಎಂ ಬದಲಾವಣೆ ಇಲ್ಲ’

ಸಿಎಂ ಬದಲಾವಣೆ ಕುರಿತ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಆ ರೀತಿ ಏನೂ ಕಾಣಿಸುತ್ತಿಲ್ಲ ಎಂದರು. ಉಳಿದಂತೆ ಸನ್ಯಾಸಿಯ ಕಥೆಯನ್ನೇ ಉದಾಹರಣೆಯಾಗಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:48 pm, Tue, 30 July 24

Follow us on