ನಾನು ಗಂಡಸಾಗಿ ಹುಟ್ಟಿರುವುದೇ ತಪ್ಪಾ? ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ

Edited By:

Updated on: Mar 04, 2026 | 4:51 PM

ಕೊಪ್ಪಳದ ಕುಕನೂರ ತಾಲೂಕಿನ ಕೋಮಲಾಪುರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿದ್ದೇಶ ಶೆಟ್ಟರ್ ತಮ್ಮ ಪತ್ನಿಯಿಂದ ತಾವು ಹಿಂಸೆಗೆ ಒಳಗಾಗಿದ್ದು, ಶಾಲೆಯಲ್ಲಿ ಪ್ರತಿದಿನ ಗಲಾಟೆ ಸೃಷ್ಟಿಸಿ ತಮ್ಮ ವೃತ್ತಿ ಬದುಕಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮನ್ನು ಒತ್ತೆಯಾಳು ರೀತಿ ಇಟ್ಟುಕೊಂಡು, ಹಲ್ಲೆ ನಡೆಸಲಾಗುತ್ತಿದೆ ಹಾಗೂ ಸಾರ್ವಜನಿಕವಾಗಿ ಮಾನಹಾನಿ ಮಾಡಲಾಗುತ್ತಿದೆ ಎಂದು ಶೆಟ್ಟರ್ ಹೇಳಿದ್ದಾರೆ.

ಕೊಪ್ಪಳ, ಮಾ.4: ಜಿಲ್ಲೆಯ ಕುಕನೂರ ತಾಲೂಕಿನ ಕೋಮಲಾಪುರ ಗ್ರಾಮದ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿದ್ದೇಶ ಶೆಟ್ಟರ್ ಅವರ ವೈಯಕ್ತಿಕ ಬದುಕಿನ ವಿವಾದ ಶಾಲಾ ಆವರಣದಲ್ಲಿ ಸಾರ್ವಜನಿಕ ಗಲಾಟೆಗೆ ಕಾರಣವಾಗಿದೆ. ತಮ್ಮ ಪತ್ನಿ ಪ್ರತಿದಿನ ಶಾಲೆಗೆ ಬಂದು ಕಿರಿಕ್​​ ಮಾಡುವುದು, ತಮ್ಮ ವೃತ್ತಿ ಬದುಕಿಗೆ ಮತ್ತು ಸಾರ್ವಜನಿಕ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಶಿಕ್ಷಕ ಸಿದ್ದೇಶ ಶೆಟ್ಟರ್ ಆರೋಪಿಸಿದ್ದಾರೆ. ಸಿದ್ದೇಶ ಶೆಟ್ಟರ್ ಅವರ ಹೇಳಿಕೆಯ ಪ್ರಕಾರ, ತಮ್ಮ ಪತ್ನಿ ತಮ್ಮನ್ನು ಮನೆಯಲ್ಲಿ ಕೈದಿ ತರಹ ಇಟ್ಟುಕೊಂಡಿದ್ದು, ಕುಟುಂಬದ ಸದಸ್ಯರೊಂದಿಗೆ ಅಥವಾ ಕಚೇರಿಯಿಂದ ಬರುವ ಯಾವುದೇ ಕರೆಗಳನ್ನು ಸ್ವೀಕರಿಸಲು ಬಿಡುತ್ತಿಲ್ಲ. ಇದರ ಜೊತೆಗೆ, ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಲಾಗುತ್ತಿದ್ದು, ದೇಹದ ಮೇಲೆ ಗಾಯಗಳಾಗಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ. “ಅವರಪ್ಪನ ಬಳಿ ವರದಕ್ಷಿಣೆ ತಗೊಂಡು ಬಾ” ಎಂದು ಒತ್ತಾಯಿಸುತ್ತಿದ್ದಾರೆ ಎಂದು ತಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡುವ ಬೆದರಿಕೆಗಳನ್ನು ಹಾಕಲಾಗುತ್ತಿದೆ ಎಂದಿದ್ದಾರೆ.

ತಮಗೆ ಈಗಾಗಲೇ ಮದುವೆಯಾಗಿದ್ದು, ಮಕ್ಕಳೂ ಇದ್ದಾರೆ ಎಂದು ಸಿದ್ದೇಶ ಶೆಟ್ಟರ್ ಹೇಳಿದ್ದಾರೆ. ತಮ್ಮ ಮಗ ಇಂಜಿನಿಯರಿಂಗ್ ಓದುತ್ತಿದ್ದು, ಮೊದಲ ಪತ್ನಿ ಮತ್ತು ಮಕ್ಕಳ ಜೊತೆ ಇರಲು ಬಿಡುತ್ತಿಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ತಾನು ಮಾಸಿಕ ನಿರ್ವಹಣಾ ವೆಚ್ಚವನ್ನು ನೀಡುತ್ತಿದ್ದು, ತಮ್ಮ ಪತ್ನಿಯ ಕೈ ಬಿಟ್ಟಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೂ, ತಮ್ಮ ಮಕ್ಕಳನ್ನು ಭೇಟಿ ಮಾಡಲು ಹೋದಾಗ ಅಥವಾ ಊರಿಗೆ ಹೋಗಲು ಬಯಸಿದಾಗ ಆಕೆ ತಕರಾರು ಮಾಡುತ್ತಾಳೆ ಎಂದು ಅವರು ತಿಳಿಸಿದ್ದಾರೆ. ಶಾಲಾ ಆವರಣದಲ್ಲಿ ಆಕೆ ಪ್ರತಿದಿನ ಬಂದು ಗಲಾಟೆ ಮಾಡುವುದರಿಂದ ತಮ್ಮ ಚಾರಿತ್ರ್ಯ ಹರಣವಾಗುತ್ತಿದೆ. ಇದರಿಂದ ತಲೆ ಎತ್ತಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ಮತ್ತು ಸಹ ಶಿಕ್ಷಕರ ಎದುರು ತಮ್ಮ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಶೆಟ್ಟರ್ ಆತಂಕ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಬ್ಯಾಗ್ ಬಿಸಾಕುವುದು, ಮೊಬೈಲ್ ಕಿತ್ತುಕೊಳ್ಳುವುದು ಸೇರಿದಂತೆ ಸಾರ್ವಜನಿಕವಾಗಿ ಕಿರಿಕಿರಿ ಉಂಟುಮಾಡುತ್ತಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ. ವೈಯಕ್ತಿಕ ಸಮಸ್ಯೆಗಳನ್ನು ಸಾರ್ವಜನಿಕವಾಗಿ ಹೀಗೆ ಬೆರೆಸಿದರೆ, ವೃತ್ತಿ ಬದುಕನ್ನು ಮುಂದುವರಿಸುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ. ರಸ್ತೆಯಲ್ಲಿ ಹೋಗುವಾಗ ಕಲ್ಲು ಎಸೆಯುವಷ್ಟರ ಮಟ್ಟಿಗೆ ಪರಿಸ್ಥಿತಿ ತಲುಪಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 04, 2026 04:46 PM
Follow Us