ಕೆಪಿಎಸ್ಸಿ ನೇಮಕಾತಿ ಹಗರಣ: ಬಗೆದಷ್ಟೂ ಬಯಲಾಗ್ತಿದೆ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ಕಳ್ಳಾಟ
ಕೆಪಿಎಸ್ಸಿ ನೇಮಕಾತಿ ಹಗರಣದ ತನಿಖೆ ತೀವ್ರಗೊಂಡಿದೆ. ಜ್ಞಾನೇಂದ್ರ ಕುಮಾರ್ ಪ್ರಶ್ನೆಪತ್ರಿಕೆಗಳನ್ನು ಕನ್ನಾಳೆಗೆ ನೀಡಿದ್ದು, ಕನ್ನಾಳೆ ಅದನ್ನು 10ಕ್ಕೂ ಹೆಚ್ಚು ಜನರಿಗೆ ಮಾರಾಟ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ. ಈ ವ್ಯವಹಾರದಲ್ಲಿ ಜ್ಞಾನೇಂದ್ರ 1.3 ಕೋಟಿ ನಗದು ಮತ್ತು 23 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದಿರುವುದು, ಹಾಗೂ ಸಾಕ್ಷಿ ನಾಶಪಡಿಸಲು ಟ್ಯಾಬ್ ಒಡೆದು ಹಾಕಿರುವುದು ಇಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರು, ಅಕ್ಟೋಬರ್ 19: ಕೆಪಿಎಸ್ಸಿ ನೇಮಕಾತಿ ಹಗರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಹೊಸ ಹೊಸ ಸಂಗತಿಗಳು ಬಯಲಾಗುತ್ತಿವೆ. ಬಸವರಾಜ್ ಕನ್ನಾಳೆ ಕೇವಲ ಒಬ್ಬರು ಅಥವಾ ಇಬ್ಬರಿಗೆ ಮಾತ್ರ ಪ್ರಶ್ನೆಪತ್ರಿಕೆ ನೀಡುವುದಾಗಿ ಜ್ಞಾನೇಂದ್ರ ಕುಮಾರ್‌ಗೆ ತಿಳಿಸಿದ್ದ. ಆದರೆ, ಕನ್ನಾಳೆ 10ಕ್ಕೂ ಹೆಚ್ಚು ಜನರಿಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿರುವ ವಿಚಾರವೀಗ ಬಯಲಾಗಿದೆ. ಜ್ಞಾನೇಂದ್ರ ಕುಮಾರ್ ಕನ್ನಾಳೆಯಿಂದ 1.3 ಕೋಟಿ ರೂಪಾಯಿ ನಗದು ಪಡೆದಿದ್ದರು. 23 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸಿದ್ದು, ತನ್ನ ಕುಟುಂಬದ ಇಬ್ಬರಿಗೆ 25 ಲಕ್ಷ ರೂಪಾಯಿ ವರ್ಗಾಯಿಸಿದ್ದರು ಎಂಬುದೂ ತಿಳಿದುಬಂದಿದೆ. ಪ್ರಶ್ನೆಪತ್ರಿಕೆ ಸೋರಿಕೆಗಾಗಿ ಜ್ಞಾನೇಂದ್ರ ತಮ್ಮ ಕಚೇರಿಯಲ್ಲಿ ಪ್ರಶ್ನೆಪತ್ರಿಕೆ ಮತ್ತು ಕೀ ಆನ್ಸರ್ ಅನ್ನು ಟ್ಯಾಬ್‌ನಲ್ಲಿ ದಾಖಲಿಸಿಕೊಂಡಿದ್ದರು. ಪರೀಕ್ಷೆ ಹಿಂದಿನ ದಿನ ಅದನ್ನು ಹೆಚ್‌ಪಿ ಪೆನ್ ಡ್ರೈವ್‌ಗೆ ಕಾಪಿ ಮಾಡಿ ಜನವರಿ 7ರಂದು ಕನ್ನಾಳೆಗೆ ನೀಡಿದ್ದರು. ನಂತರ, ಸಾಕ್ಷ್ಯ ನಾಶಪಡಿಸಲು ಟ್ಯಾಬ್ ಒಡೆದು ಬಿಸಾಕಲಾಗಿತ್ತು ಎಂಬ ಮಾಹಿತಿ ತನಿಖೆ ವೇಳೆ ಸಿಕ್ಕಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
