ಬೆಂಗಳೂರು ಏರ್ಪೋರ್ಟ್ – ದಾವಣಗರೆ ಮಧ್ಯೆ ಕೆಎಸ್​ಆರ್​ಟಿಸಿ ಫ್ಲೈಬಸ್​ ಸೇವೆಗೆ ಚಾಲನೆ

Updated By: Ganapathi Sharma

Updated on: Nov 13, 2025 | 10:27 AM

Bengaluru Airport to Davanagere Flybus: ದಾವಣಗೆರೆ ಹಾಗೂ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಧ್ಯೆ ಸಂಚರಿಸುವ ಕೆಎಸ್​ಆರ್​ಟಿಸಿ ನೂತನ ಫ್ಲೈಬಸ್ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದ್ದಾರೆ. ಈ ಹೊಸ ಸೇವೆಯಿಂದ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಬೆಂಗಳೂರು, ನವೆಂಬರ್ 12: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆಗೆ ನೇರ ಸಂಚಾರಕ್ಕಾಗಿ ಕೆಎಸ್​ಆರ್​ಟಿಸಿ ನೂತನ ಫ್ಲೈಬಸ್ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ಚಾಲನೆ ನೀಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಐಎಬಿ (KIA) ನಿಂದ ದಾವಣಗೆರೆಗೆ ಪ್ರತಿದಿನ ಎರಡು ಫ್ಲೈಬಸ್‌ಗಳು ಸಂಚರಿಸಲಿವೆ. ಈ ಬಸ್‌ಗಳು ತುಮಕೂರು ಮತ್ತು ಚಿತ್ರದುರ್ಗ ಬೈಪಾಸ್ ಮಾರ್ಗವಾಗಿ ಪ್ರಯಾಣಿಸಲಿವೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಏರ್‌ಪೋರ್ಟ್‌ಗೆ ಬರುವ ಮತ್ತು ಏರ್ಪೋರ್ಟ್​​ನಿಂದ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಈ ನೂತನ ಫ್ಲೈಬಸ್ ಸೇವೆ ಆರಂಭಿಸಲಾಗಿದೆ. ಈ ಬಸ್‌ಗಳಲ್ಲಿ ಶೌಚಾಲಯ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನೂ ಒದಗಿಸಲಾಗಿದೆ. ಇಲ್ಲಿಯವರೆಗೆ ಮೈಸೂರು, ಮಡಿಕೇರಿ, ಕುಂದಾಪುರ ಸೇರಿದಂತೆ ಕೆಲವು ನಗರಗಳಿಗೆ ಮಾತ್ರ ಫ್ಲೈಬಸ್ ಸೇವೆ ಲಭ್ಯವಿತ್ತು. ಈಗಿನಿಂದ ಹೆಚ್ಚುವರಿಯಾಗಿ ದಾವಣಗೆರೆಯತ್ತವೂ ನೇರ ಸಂಪರ್ಕ ಸಿಗಲಿದೆ.

ಬೆಂಗಳೂರಿನಿಂದ ದಾವಣಗೆರೆ ಬಸ್ ವೇಳಾಪಟ್ಟಿ

ಬೆಂಗಳೂರು ವಿಮಾನ ನಿಲ್ದಾಣದಿಂದ ತಡರಾತ್ರಿ 00:45 ಗಂಟೆಗೆ ಹೊರಟು ಬೆಳಗ್ಗೆ 5:45 ಗಂಟೆಗೆ ದಾವಣಗೆರೆಗೆ ತಲುಪಲಿದೆ. ಬೆಳಗ್ಗೆ 10 ಗಂಟೆಗೆ ಹೊರಟು ಮಧ್ಯಾಹ್ನ 3 ಗಂಟೆಗೆ ದಾವಣಗೆರೆಗೆ ತಲುಪಲಿದೆ.

ದಾವಣಗೆರೆಯಿಂದ ವಿಮಾನ ನಿಲ್ದಾಣಕ್ಕೆ ಬಸ್ ವೇಳಾಪಟ್ಟಿ

ದಾವಣಗೆರೆಯಿಂದ ಬೆಳಗ್ಗೆ 8 ಗಂಟೆಗೆ ಹೊರಟ ಬಸ್ ಮಧ್ಯಾಹ್ನ 1ಕ್ಕೆ ವಿಮಾನ ನಿಲ್ದಾಣ ತಲುಪಲಿದೆ. ದಾವಣಗೆರೆಯಿಂದ ಸಂಜೆ 5ಕ್ಕೆ ಹೊರಡುವ ಬಸ್ ರಾತ್ರಿ 10 ಗಂಟೆಗೆ ವಿಮಾನ ನಿಲ್ದಾಣ ತಲುಪಲಿದೆ.

ಇದನ್ನೂ ಓದಿ: ಕೆಎಸ್​ಆರ್​ಟಿಸಿಯ ಈ ಬಸ್​ನಲ್ಲಿ ಇಂದಿನಿಂದ ಸಿಗುತ್ತೆ ನಂದಿನಿ ಸ್ನ್ಯಾಕ್ ಕಿಟ್!

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 12, 2025 11:43 AM