8ನೇ ತರಗತಿಯ ವಿದ್ಯಾರ್ಥಿ ಕಣ್ಣಿಗೆ ಬಿದ್ದ ನಿಧಿಯ ಪಾತ್ರೆ: ಈ ಚಿನ್ನ ಯಾರಿಗೆ ಸೇರಲಿದೆ ಗೊತ್ತಾ?
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ಅಡಿಪಾಯ ಅಗೆಯುವಾಗ 8ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ರಿತ್ತಿಗೆ 466-470 ಗ್ರಾಂ ಚಿನ್ನಾಭರಣ ಮತ್ತು ತಾಮ್ರದ ಮಡಿಕೆ ಸಿಕ್ಕಿದೆ. ಆತ ತಕ್ಷಣ ಗ್ರಾಮದ ಹಿರಿಯರಿಗೆ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪ್ರಾಮಾಣಿಕತೆಯ ಮಾದರಿಯಾಗಿದ್ದಾನೆ. ಪುರಾತನ ವಸ್ತುಗಳನ್ನು ಕಾನೂನುಬದ್ಧವಾಗಿ ವಶಕ್ಕೆ ಪಡೆದು ಖಜಾನೆಗೆ ವರ್ಗಾಯಿಸಲಾಗಿದೆ.
ಗದಗ, ಜ.10: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ರಾಜರ ಕಾಲದ ಅಪಾರ ಚಿನ್ನಾಭರಣಗಳ ನಿಧಿ ಪತ್ತೆಯಾಗಿದ್ದು, ಇದು ಇಡೀ ರಾಜ್ಯದ ಗಮನ ಸೆಳೆದಿದೆ. ಲಕ್ಕುಂಡಿ ಗ್ರಾಮದ ವಾರ್ಡ್ ನಂಬರ್ ನಾಲ್ಕರಲ್ಲಿರುವ ಗಂಗವ್ವ ಬಸವರಾಜ ರಿತ್ತಿ ಅವರ ಮನೆ ಜಾಗದಲ್ಲಿ ಅಡಿಪಾಯ ಅಗೆಯುವ ಸಂದರ್ಭದಲ್ಲಿ, 8ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ರಿತ್ತಿ ಎಂಬುವರಿಗೆ ಒಂದು ತಾಮ್ರದ ಚಂಬಿನಲ್ಲಿ ಚಿನ್ನಾಭರಣಗಳು ಸಿಕ್ಕಿವೆ. ಪ್ರಾಥಮಿಕ ಮಾಹಿತಿ ಪ್ರಕಾರ, ಪ್ರಜ್ವಲ್ಗೆ ತಾಮ್ರದ ಮಡಿಕೆಯಲ್ಲಿ ನಿಧಿ ಸಿಕ್ಕಿದೆ ಎಂಬ ಮಾಹಿತಿ ಮಧ್ಯಾಹ್ನ 2:30 ರಿಂದ 3:30ರ ನಡುವೆ ಬಂದಿದೆ. ಮೇಲ್ನೋಟಕ್ಕೆ ಅದರಲ್ಲಿ ಏನಿದೆ ಎಂದು ಸ್ಪಷ್ಟವಾಗದಿದ್ದರೂ, ಪ್ರಜ್ವಲ್ ತನ್ನ ವಯಸ್ಸಿಗೆ ಮೀರಿದ ಪ್ರಾಮಾಣಿಕತೆಯನ್ನು ತೋರಿಸಿದ್ದಾನೆ. ಆತ ತಕ್ಷಣವೇ ಗ್ರಾಮದ ಹಿರಿಯರಿಗೆ, ಗ್ರಾಮ ಪಂಚಾಯತ್ ಸದಸ್ಯರಿಗೆ, ಮತ್ತು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿದ್ದು ಪಾಟೀಲ್ ಅವರಿಗೆ ವಿಷಯ ತಿಳಿಸಿದ್ದಾನೆ. ಸಿದ್ದು ಪಾಟೀಲ್ ಅವರು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಎಚ್.ಕೆ. ಪಾಟೀಲ್ ಅವರಿಗೆ ಈ ಮಾಹಿತಿಯನ್ನು ರವಾನಿಸಿದ್ದಾರೆ. ಎಚ್.ಕೆ. ಪಾಟೀಲ್ ಅವರ ನಿರ್ದೇಶನದ ಮೇರೆಗೆ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಲಕ್ಕುಂಡಿ ಗ್ರಾಮಕ್ಕೆ ದೌಡಾಯಿಸಿ, ವಾಸ್ತವಾಂಶವನ್ನು ಪರಿಶೀಲಿಸಿದ್ದಾರೆ. ಕಾನೂನುಬದ್ಧವಾಗಿ ಪ್ರಕ್ರಿಯೆಗಳನ್ನು ನಡೆಸಲಾಯಿತು. ವಿಡಿಯೋ ರೆಕಾರ್ಡಿಂಗ್ ಮಾಡಿ, ಇಬ್ಬರು ಸರ್ಕಾರಿ ಪಂಚರು ಮತ್ತು ಇಬ್ಬರು ಗ್ರಾಮದ ಹಿರಿಯರು (ಅಧಿಕೃತವಲ್ಲದ ಪಂಚರು) ಸೇರಿದಂತೆ ಒಟ್ಟು ನಾಲ್ವರು ಪಂಚರ ಸಮ್ಮುಖದಲ್ಲಿ ಪಂಚನಾಮೆ ನಡೆಸಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ತಹಸೀಲ್ದಾರ್ ಮತ್ತು ಎಡಿಸಿ ಅಧಿಕಾರಿಗಳು ಸಹ ಉಪಸ್ಥಿತರಿದ್ದರು. ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ನಿಧಿಯಿದ್ದ ತಾಮ್ರದ ಮಡಿಕೆಯನ್ನು ತೆರೆಯಲಾಯಿತು.ಈ ಎಲ್ಲಾ ವಸ್ತುಗಳ ಪಂಚನಾಮೆ ಮಾಡಿ, ಕಾನೂನು ಪ್ರಕಾರ ರೂರಲ್ ಇನ್ಸ್‌ಪೆಕ್ಟರ್ ಮೂಲಕ ತಹಸೀಲ್ದಾರ್ ಅವರಿಗೆ ಹಸ್ತಾಂತರಿಸಲಾಯಿತು. ಪ್ರಸ್ತುತ, ಈ ಎಲ್ಲಾ ಸಾಮಗ್ರಿಗಳನ್ನು ಖಜಾನೆಗೆ ವರ್ಗಾಯಿಸಲಾಗುತ್ತಿದೆ. ಮೇಲ್ನೋಟಕ್ಕೆ, 466-470 ಗ್ರಾಂ ಚಿನ್ನದ ಇಂದಿನ ಮಾರುಕಟ್ಟೆ ಮೌಲ್ಯವು ಸುಮಾರು 60 ರಿಂದ 65 ಲಕ್ಷ ರೂಪಾಯಿಗಳಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಇದರ ಐತಿಹಾಸಿಕ ಮಹತ್ವ ಮತ್ತು ಪುರಾತನ ಮೌಲ್ಯವು ಪ್ರಸ್ತುತ ಚಿನ್ನದ ಬೆಲೆಗಿಂತ ಹೆಚ್ಚು ಇರಬಹುದು. ಇದರ ನಿಖರವಾದ ಐತಿಹಾಸಿಕ ಮೌಲ್ಯವನ್ನು ಪುರಾತತ್ವ ಇಲಾಖೆಯ ತಜ್ಞರು ಪರಿಶೀಲಿಸಿದ ನಂತರವೇ ತಿಳಿಯಲಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
