Pralhad Joshi: ಸುಳ್ಳು ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು : ಕಾಂಗ್ರೆಸ್ ಪಕ್ಷದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತೀವ್ರ ವಾಗ್ದಾಳಿ

| Updated By: Rakesh Nayak Manchi

Updated on: Jul 01, 2023 | 8:58 PM

ದೇಶದ 80 ಕೋಟಿ ಜನರಿಗೆ ತಲಾ 5 ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರಗಳ ಮೂಲಕ ಕೇಂದ್ರ ಸರ್ಕಾರ ಜನರಿಗೆ ತಲುಪಿಸುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ಈ ಸತ್ಯ ಹೇಳಲು ಈಗಲೂ ತಯಾರಿಲ್ಲ. ಕಾಂಗ್ರೆಸ್ ಪಕ್ಷದ ಸುಳ್ಳುಗಳಿಂದ ಜನ ಭ್ರಮ ನಿರಸನಗೊಂಡಿದ್ದು, ತಕ್ಕ ಪಾಠ ಕಲಿಸುತ್ತಾರೆ ಅಂತ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ವಾಗ್ದಾಳಿ ನಡೆಸಿದರು.

ಧಾರವಾಡ : ಗ್ಯಾರಂಟಿ ಭರವಸೆ ವಿಚಾರದಲ್ಲಿ ನಿರಂತರವಾಗಿ ಸುಳ್ಳು ಹೇಳುತ್ತಿರುವ ಕಾಂಗ್ರೆಸ್ (Congress) ಪಕ್ಷ ಹಾಗೂ ಸುಳ್ಳು ಎರಡೂ ಸಹ ಒಂದೇ ನಾಣ್ಯದ ಎರಡು ಮುಖಗಳು ಅಂತ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು (Pralhad Joshi) ವಾಗ್ದಾಳಿ ನಡೆಸಿದ್ದಾರೆ. ಧಾರವಾಡದಲ್ಲಿಂದು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಗ್ಯಾರಂಟಿ ವಿಚಾರದಲ್ಲಿ ಸುಳ್ಳು ಹೇಳೋದನ್ನ ಕಾಂಗ್ರೆಸ್ ಪಕ್ಷ ತನ್ನ ಜನ್ಮಸಿದ್ಧ ಹಕ್ಕು ಅಂತ ಭಾವಿಸಿದೆ. ಕಾಂಗ್ರೆಸ್ ನಾಯಕರು 10 ಕೆಜಿ ಅಕ್ಕಿ ಕೊಡ್ತೀವಿ ಅಂದ್ರು, ಆದರೆ ಅದು ಸುಳ್ಳು ಅಂತ ನಾವು ಮತ್ತೆ ಮತ್ತೆ ಹೇಳಿದ್ವಿ. ಅಕ್ಕಿ ಕೊಡ್ತಿರೋದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂತ ಜನರಿಗೂ ಸಹ ತಿಳಿದಿತ್ತು. ದೇಶಾದ್ಯಂತ ಒಟ್ಟು 80 ಕೋಟಿ ಜನರಿಗೆ ತಲಾ 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡ್ತಿದೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಜನರ ದಾರಿ ತಪ್ಪಿಸಲು ಯುಪಿಎ ಸರ್ಕಾರದ ಕಾಲದಲ್ಲಿ ಕಾಯ್ದೆ ಜಾರಿಗೆ ಬಂತು ಅಂತಿದ್ರು. ಆದರೆ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆಗೆ ಕನಿಷ್ಠ ಕಾನೂನುಗಳನ್ನೂ ರೂಪಿಸಿರಲಿಲ್ಲ. ಕಾಯ್ದೆ ಕೇವಲ ಪೇಪರ್ ಮೇಲಷ್ಟೇ ಇತ್ತು. ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ನಂತರ ಆಹಾರ ಭದ್ರತಾ ಕಾಯ್ದೆಯನ್ನು ಸರಿಪಡಿಸಿ, ಅದಕ್ಕೆ ಕಾನೂನುಗಳನ್ನು ರೂಪಿಸಿ ಜಾರಿ ಮಾಡಿದರು.

ಕೇಂದ್ರ ಸರ್ಕಾರದ ಬಳಿ ಹೆಚ್ಚುವರಿ ಅಕ್ಕಿ ಇದೆ ಎಂಬ ಕಾಂಗ್ರೆಸ್ ನಾಯಕರ ಮಾತು ಶುದ್ಧಾಂಗ ಸುಳ್ಳು. ಈಗಾಗಲೇ ದೇಶದ 80 ಕೋಟಿ ಜನರಿಗೆ ತಲಾ 5 ಕೆಜಿ ಅಕ್ಕಿ ಕೊಡ್ತಿದ್ದೇವೆ. ಈ ಬಾರಿ ದೇಶದ ಅನೇಕ ಕಡೆಗಳಲ್ಲಿ ಬರದ ಛಾಯೆ ಇದೆ. “ಎಲಿನೋ” ಪರಿಣಾಮದಿಂದ ಒಟ್ಟು ಕೃಷಿ ಉತ್ಪಾದನೆಯಲ್ಲಿ ತೀವ್ರತರವಾದ ಕಡಿತ ಆಗಲಿದೆ ಅಂತ ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ 80 ಕೋಟಿ ಜನರಿಗೆ ತಲಾ ಐದು ಕೆಜಿ ಅಕ್ಕಿ ಕೊಟ್ಟ ನಂತರ ಉಳಿಯುವ ಅಲ್ಪ ಪ್ರಮಾಣದ ಅಕ್ಕಿಯನ್ನು ಬರ, ಪ್ರಕೃತಿ ವಿಕೋಪದಂತಹ ಸಂಧರ್ಭಕ್ಕೆ ಹಾಗೂ ದೇಶದ ಉಳಿದ 60 ಕೋಟಿ ಜನರಿಗೆ ನೀಡಲು ಉಪಯೋಗಿಸಿಕೊಳ್ಳಲಾಗುವುದು. ದೇಶದಲ್ಲಿ Inflation ಆಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಆದ್ದರಿಂದ ಈ ಜಾಗೃತೆ ವಹಿಸಿದ್ದೇವೆ ಎಂದು ಪ್ರಲ್ಹಾದ ಜೋಶಿಯವರು ಅಕ್ಕಿ ವಿಚಾರದಲ್ಲಿ ಸವಿವರವಾದ ಕ್ಲಾರಿಟಿ ನೀಡಿದರು.

Lungi Factor: ಕಾಂಗ್ರೆಸ್ ಮೊದಲು ಇಟಲಿ ರಾಜಮಾತೆ ಸೆರಗಿನಿಂದ ಹೊರ ಬರಲಿ: ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ

ಚುನಾವಣೆಯ ಸಂಧರ್ಭದಲ್ಲಿ 10 ಕೆಜಿ ಅಕ್ಕಿ ಕೊಡ್ತೀವಿ ಅಂತ ಭಾಷಣ ಮಾಡಿದ ಕಾಂಗ್ರೆಸ್ ನಾಯಕರು ಈಗಲಾದರೂ ಸತ್ಯ ಒಪ್ಪಿಕೊಳ್ಳಲಿ, 5 ಕೆಜಿ ಅಕ್ಕಿ ಕೊಡ್ತಿರೋದು ಕೇಂದ್ರ ಸರ್ಕಾರ ಅಂತ ಜನರಿಗೆ ಸತ್ಯ ಹೇಳಲಿ. ದೇಶದ 80 ಕೋಟಿ ಜನರಿಗೆ ತಲಾ 5 ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರಗಳ ಮೂಲಕ ಕೇಂದ್ರ ಸರ್ಕಾರ ಜನರಿಗೆ ತಲುಪಿಸುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ಈ ಸತ್ಯ ಹೇಳಲು ಈಗಲೂ ತಯಾರಿಲ್ಲ. ಕಾಂಗ್ರೆಸ್ ಪಕ್ಷದ ಸುಳ್ಳುಗಳಿಂದ ಜನ ಭ್ರಮ ನಿರಸನಗೊಂಡಿದ್ದು, ತಕ್ಕ ಪಾಠ ಕಲಿಸುತ್ತಾರೆ ಅಂತ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ವಾಗ್ದಾಳಿ ನಡೆಸಿದರು.

ಇನ್ನು ನಿರುದ್ಯೋಗ ಭತ್ಯೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ಚುನಾವಣೆ ಸಂಧರ್ಭದಲ್ಲಿ ಕಾಂಗ್ರೆಸ್ ನಾಯಕರು ರಾಜ್ಯದ ಎಲ್ಲಾ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ಕೊಡ್ತೀವಿ ಅಂದಿದ್ರು. ಅವರು ಕೊಟ್ಟ ಗ್ಯಾರಂಟಿ ಕಾರ್ಡಲ್ಲಿ ಎಲ್ಲೂ ಸಹ 2022-23ರಲ್ಲಿ ಪಾಸಾದ ನಿರುದ್ಯೋಗಿಗಳಿಗೆ ಮಾತ್ರ ಭತ್ಯೆ ಕೊಡ್ತೀವಿ ಅಂತ ಕಂಡೀಷನ್ ಹಾಕಿರಲಿಲ್ಲ. ಆದರೆ ಈಗ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ನಾಯಕರು ಕಂಡೀಷನ್ ಗಳ ಮೇಲೆ ಕಂಡೀಷನ್ ಹಾಕ್ತಿದ್ದಾರೆ. 2022-23ರಲ್ಲಿ ಡಿಗ್ರಿ ವಿದ್ಯಾರ್ಥಿಗಳ ಫಲಿತಾಂಶ ಬರೋದು ಜುಲೈ ತಿಂಗಳಿನಲ್ಲಿ. ಆಗಲೂ ಇವರು ನಿರುದ್ಯೋಗ ಭತ್ಯ ಕೊಡಲ್ವಂತೆ. ಇದಾದ ನಂತರ ಆರು ತಿಂಗಳು ಕಾಯಬೇಕು. ಅಂದರೆ ಅದೂ ಸಹ ಇವರು ಮುಂದಿನ ಜನವರಿ ಅಥವಾ ಫೆಬ್ರವರಿಯಲ್ಲಿ ಕೊಡ್ತೀವಿ ಅಂತಿದ್ದಾರೆ. ಕಾಂಗ್ರೆಸ್ ನಾಯಕರ ಸುಳ್ಳಿನ ಸರಣಿ ಹೀಗೆ ಅವ್ಯಾಹತವಾಗಿ ಮುಂದುವರಿದಿದೆ ಅಂತ ಪ್ರಲ್ಹಾದ ಜೋಶಿಯವರು ಕೈ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Published On - 6:20 pm, Sat, 1 July 23

Follow us on