ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್: ಲೋಕಾಯುಕ್ತ ದಾಳಿಯಲ್ಲಿ ಬಯಲಾಯಿತು ಸತ್ಯ

Edited By:

Updated on: Jun 12, 2026 | 9:41 PM

ರಾಮನಗರ ಆರ್‌ಟಿಓ ಕಚೇರಿ ಮೇಲೆ ಲೋಕಾಯುಕ್ತ ಎಸ್‌ಪಿ ಪಿ.ವಿ. ಸ್ನೇಹಾ ನೇತೃತ್ವದಲ್ಲಿ ದಾಳಿ ನಡೆದಿದೆ. ಸ್ಮಾರ್ಟ್ ಕಾರ್ಡ್‌ಗಳ ವಿತರಣೆಯಲ್ಲಿ ವಿಳಂಬ, ಅನಧಿಕೃತ ವ್ಯಕ್ತಿಗಳ ಮೂಲಕ ಕೆಲಸ ನಿರ್ವಹಣೆ ಹಾಗೂ ಮಧ್ಯವರ್ತಿಗಳ ಹಾವಳಿ ಕುರಿತು ತೀವ್ರ ಪರಿಶೀಲನೆ ನಡೆಸಲಾಯಿತು. ಅನಾರೋಗ್ಯದ ಕಾರಣ ರಜೆಯಲ್ಲಿದ್ದ ಉದ್ಯೋಗಿಯ ಬದಲಿಗೆ ಮಗಳು ಕೆಲಸ ಮಾಡುತ್ತಿದ್ದ ಪ್ರಕರಣವೂ ಬಯಲಾಗಿದೆ.

ರಾಮನಗರ, ಜೂ.12: ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (RTO) ನಡೆಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರ ಹಾಗೂ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್​ಪಿ ಪಿ.ವಿ.ಸ್ನೇಹಾ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯ ವೇಳೆ ಕಚೇರಿಯ ಇಂಚಿಂಚೂ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಆರ್‌ಟಿಒ ಕಚೇರಿಯ ಕರಾಳ ಮುಖ ಬಯಲಾಗಿದೆ. ನಿಯಮದ ಪ್ರಕಾರ ಕೇವಲ 7 ದಿನಗಳಲ್ಲಿ ಸಾರ್ವಜನಿಕರ ಕೈ ಸೇರಬೇಕಾಗಿದ್ದ ಲೈಸೆನ್ಸ್ ಹಾಗೂ ಆರ್‌ಸಿ ಸ್ಮಾರ್ಟ್ ಕಾರ್ಡ್‌ಗಳು, ಮೂರು ತಿಂಗಳು ಕಳೆದರೂ ವಿತರಣೆಯಾಗದೆ ಕಚೇರಿಯಲ್ಲೇ ಕಂತೆ ಕಂತೆಯಾಗಿ ಶೇಖರಣೆಗೊಂಡಿರುವುದು ಪತ್ತೆಯಾಗಿದೆ. ಸಾರ್ವಜನಿಕರು ನೇರವಾಗಿ ಬಂದರೆ ಕೆಲಸ ಮಾಡಿಕೊಡದ ಸಿಬ್ಬಂದಿ, ಏಜೆಂಟ್​ಗಳ ಮೂಲಕ ಲಂಚದ ಹಣದೊಂದಿಗೆ ಬಂದರೆ ಮಾತ್ರ ಕೆಲಸ ಮಾಡಿಕೊಡುತ್ತಿದ್ದರು ಎಂಬ ದೂರುಗಳು ದಾಳಿ ವೇಳೆ ಸಾಬೀತಾಗಿವೆ. ಇನ್ನು ವಾರದ ಹಿಂದೆಯಷ್ಟೇ ಇದೇ ಕಚೇರಿ ಆವರಣದಲ್ಲಿ ಕಮಿಷನ್ ವಿಚಾರಕ್ಕಾಗಿ ಏಜೆಂಟ್​ಗಳ ನಡುವೆ ಭೀಕರ ಹೊಡೆದಾಟ ನಡೆದಿದ್ದರೂ ಆರ್‌ಟಿಒ ಅಧಿಕಾರಿಗಳು ಯಾವುದೇ ಪೊಲೀಸ್ ದೂರು ನೀಡದೆ ಭ್ರಷ್ಟರನ್ನು ರಕ್ಷಿಸಿದ್ದರು ಎನ್ನಲಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಕಚೇರಿಯ ಮೇಲೆ ಈಗಾಗಲೇ ಮೂರು ಬಾರಿ ಲೋಕಾಯುಕ್ತ ದಾಳಿ ನಡೆದಿದ್ದರೂ ಭ್ರಷ್ಟಾಚಾರದ ಹಾದಿ ಮಾತ್ರ ಬದಲಾಗಿರಲಿಲ್ಲ. ಕಚೇರಿಯಲ್ಲಿ ತುಂಬಿ ತುಳುಕುತ್ತಿದ್ದ ಅಕ್ರಮಗಳು, ಸ್ಮಾರ್ಟ್ ಕಾರ್ಡ್ ವಿಳಂಬ ಹಾಗೂ ಏಜೆಂಟ್‌ಗಳ ದರ್ಬಾರ್ ಕುರಿತು ಲೋಕಾಯುಕ್ತ ಎಸ್​ಪಿ ಪಿ.ವಿ.ಸ್ನೇಹಾ ಅವರು ಕೇಳಿದ ಖಡಕ್ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಆರ್‌ಟಿಒ ಅಧಿಕಾರಿ ಟಿ.ಎ.ಸತೀಶ್ ಬಾಬು ಕಚೇರಿಯಲ್ಲೇ ತಬ್ಬಿಬ್ಬಾಗಿ ತಡಕಾಡಿದ್ದಾರೆ. ಸದ್ಯ ಲೋಕಾಯುಕ್ತ ಅಧಿಕಾರಿಗಳು ಕಚೇರಿಯ ಪ್ರಮುಖ ಕಡತಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us