Maharaja Trophy 2024: 3 ಸೂಪರ್ ಓವರ್ಸ್; ಐತಿಹಾಸಿಕ ಪಂದ್ಯದ ವಿಡಿಯೋ ರಿಲೀಸ್
Maharaja Trophy 2024: ಹುಬ್ಬಳ್ಳಿ ಟೈಗರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ನಡುವೆ ನಡೆದ ಮಹಾರಾಜ ಟ್ರೋಫಿ ಪಂದ್ಯ ಮೂರು ಮೂರು ಸೂಪರ್ಗಳಿಗೆ ಸಾಕ್ಷಿಯಾಯಿತು. ಅಂತಿಮವಾಗಿ ಮೂರನೇ ಸೂಪರ್ ಓವರ್ನಲ್ಲಿ ಗೆಲುವಿಗೆ 13 ರನ್ಗಳ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್ ತಂಡದ ಪರ ಮನ್ವಂತ್ ಕುಮಾರ್ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
ಹುಬ್ಬಳ್ಳಿ ಟೈಗರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ನಡುವೆ ನಡೆದ ಮಹಾರಾಜ ಟ್ರೋಫಿ ಪಂದ್ಯ ಮೂರು ಮೂರು ಸೂಪರ್ಗಳಿಗೆ ಸಾಕ್ಷಿಯಾಯಿತು. ಅಂತಿಮವಾಗಿ ಮೂರನೇ ಸೂಪರ್ ಓವರ್ನಲ್ಲಿ ಗೆಲುವಿಗೆ 13 ರನ್ಗಳ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್ ತಂಡದ ಪರ ಮನ್ವಂತ್ ಕುಮಾರ್ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಇತ್ತ ಗೆಲುವಿಗಾಗಿ ಶತಪ್ರಯತ್ನ ಮಾಡಿದ ಬೆಂಗಳೂರು ತಂಡ ವೀರೋಚಿತ ಸೋಲು ಕಂಡಿತು. ಆದಾಗ್ಯೂ ಗೆಲುವಿಗಾಗಿ ಎರಡೂ ತಂಡಗಳಿಂದ ಜಿದ್ದಾಜಿದ್ದಿನ ಹೋರಾಟ ಕಂಡುಬಂದಿತ್ತು. ಇದೀಗ ಆ ಮೂರು ಸೂಪರ್ ಓವರ್ಗಳ ರಣರೋಚಕ ಕ್ಷಣಗಳ ವಿಡಿಯೋವನ್ನು ಸ್ಟಾರ್ ಸ್ಪೋಟ್ರ್ಸ್ ಕನ್ನಡ ಹಂಚಿಕೊಂಡಿದೆ.
ಮೊದಲ ಸೂಪರ್ ಓವರ್
ಮೊದಲ ಸೂಪರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಪರ ನಾಯಕ ಮಯಾಂಕ್ ಹಾಗೂ ಅನಿರುದ್ಧ್ ಜೋಶಿ ಕಣಕ್ಕಿಳಿದಿದ್ದರು. ನಾಯಕ ಮಯಾಂಕ್ ಮೊದಲ ಎಸೆತದಲ್ಲೇ ಔಟಾದರೆ, ಅನಿರುದ್ಧ್ ಜೋಶಿ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಹುಬ್ಬಳ್ಳಿಗೆ 10 ರನ್್ಗಳ ಟಾರ್ಗೆಟ್ ನೀಡಿದರು.ಈ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಕೂಡ ನಿಗದಿತ 1 ಓವರ್ ಮುಕ್ತಾಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 10 ರನ್ಗಳನ್ನು ಕಲೆಹಾಕಲಷ್ಟೇ ಶಕ್ತವಾಯಿತು. ಹೀಗಾಗಿ ಪಂದ್ಯ ಮತ್ತೆ ಸೂಪರ್ ಓವರ್ನತ್ತ ಸಾಗಿತು.
ಎರಡನೇ ಸೂಪರ್ ಓವರ್
ಎರಡನೇ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ 8 ರನ್ ಕಲೆಹಾಕಿ ಬೆಂಗಳೂರಿಗೆ 9 ರನ್ಗಳ ಟಾರ್ಗೆಟ್ ನೀಡಿತು. ಮೊದಲ ಸೂಪರ್ ಓವರ್ನಲ್ಲೇ ನಾಯಕ ಮಯಾಂಕ್ ವಿಕೆಟ್ ಕೈಚೆಲ್ಲಿದ್ದರಿಂದ ಅವರಿಗೆ ಎರಡನೇ ಸೂಪರ್ ಓವರ್ನಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಹೀಗಾಗಿ ಎರಡನೇ ಸೂಪರ್ ಓವರ್ನಲ್ಲಿ ಚೇತನ್ ಹಾಗೂ ಸೂರಜ್ ಜೊತೆಗೂಡಿ 8 ರನ್ ಕಲೆಹಾಕಲು ಶಕ್ತರಾದರು. ಹೀಗಾಗಿ ಎರಡನೇ ಸೂಪರ್ ಓವರ್ ಕೂಡ ಟೈ ಆಯಿತು.
ಮೂರನೇ ಸೂಪರ್
ಇನ್ನು ಮೂರನೇ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡದ ಪರ ಜೋಶಿ ಹಾಗೂ ಶುಭಾಂಗ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಓವರ್ನ ಮೊದಲ ಎಸೆತದಲ್ಲೇ ವಿವಾದಾತ್ಮಕ ತೀರ್ಪಿಗೆ ಜೋಶಿ ಪೆವಿಲಿಯನ್ ಸೇರಿಕೊಂಡರು. ನಂತರ ಜೊತೆಯಾದ ಶುಭಾಂಗ್ ಹಾಗೂ ಸೂರಜ್ ತಂಡದ ಮೊತ್ತವನ್ನು 12 ರನ್ಗಳಿಗೆ ಕೊಂಡೊಯ್ದರು. ಈ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಪರ ಮ್ಯಾಜಿಕ್ ಮಾಡಿದ ಮನ್ವಂತ್ ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.