ಅಜಿತ್ ಪವಾರ್ ನಿಧನಕ್ಕೆ ಕರ್ನಾಟಕ ವಿಧಾನಸಭೆಯಲ್ಲಿ ಸಂತಾಪ

Updated on: Jan 28, 2026 | 12:20 PM

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿಮಾನ ಅಪಘಾತದಲ್ಲಿ ನಿಧನರಾಗಿದ್ದು, ಕರ್ನಾಟಕ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಅವರ ದೀರ್ಘಾವಧಿಯ ರಾಜಕೀಯ ಜೀವನ, ಸಹಕಾರಿ ಕ್ಷೇತ್ರದಲ್ಲಿನ ಸೇವೆ ಹಾಗೂ ರೈತರು, ಬಡವರ ಧ್ವನಿಯಾಗಿ ಅವರ ಕೊಡುಗೆಗಳನ್ನು ಸ್ಮರಿಸಲಾಯಿತು. ಈ ಬಗ್ಗೆ ಕಲಾಪದಲ್ಲಿ ಸಚಿವರು ಅವರ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಸರ್ಕಾರದ ಮಂತ್ರಿಗಳು ಹಾಗೂ ವಿರೋಧಪಕ್ಷದ ನಾಯಕರು ಸಂತಾಪ ಸೂಚಿಸಿದ್ದಾರೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನಕ್ಕೆ ಕರ್ನಾಟಕ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು. 2026ರ ಜನವರಿ 28ರಂದು ಬಾರಾಮತಿಯಲ್ಲಿ ಕಾರ್ಯಕ್ರಮಗಳಿಗೆ ತೆರಳುತ್ತಿದ್ದಾಗ ವಿಮಾನ ಅಪಘಾತದಲ್ಲಿ ಅವರು ಹಾಗೂ ಇತರ ಐದು ಸಹ ಪ್ರಯಾಣಿಕರು ಮೃತಪಟ್ಟರು. ಅಜಿತ್ ಪವಾರ್ ಅವರು 1959ರ ಜುಲೈ 22ರಂದು ಅಹ್ಮದ್ ನಗರದ ದಿಯೋಲಾಲಿಯಲ್ಲಿ ಜನಿಸಿದರು. 1982ರಲ್ಲಿ ರಾಜಕೀಯ ಪ್ರವೇಶಿಸಿದ ಅವರು, ಪುಣೆ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ 16 ವರ್ಷ ಸೇವೆ ಸಲ್ಲಿಸಿದರು. 1991ರಲ್ಲಿ ಬಾರಾಮತಿಯಿಂದ ಲೋಕಸಭೆಗೆ ಆಯ್ಕೆಯಾದ ಅವರು, ನಂತರ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ 7 ಬಾರಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾದರು. ಅವರು ಕೃಷಿ, ವಿದ್ಯುತ್, ನೀರಾವರಿ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ಹಲವು ಇಲಾಖೆಗಳ ರಾಜ್ಯ ಸಚಿವರಾಗಿ, ಸಂಪುಟ ದರ್ಜೆ ಸಚಿವರಾಗಿ ಹಾಗೂ ಮಹಾರಾಷ್ಟ್ರದ 6 ಅವಧಿಗೆ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಬಡವರ ಮತ್ತು ರೈತರ ಧ್ವನಿಯಾಗಿ, ಅಜಿತ್ ದಾದಾ ಎಂದೇ ಖ್ಯಾತರಾಗಿದ್ದ ಅಜಿತ್ ಪವಾರ್, ನೇರ, ನಿಷ್ಠುರ ಮತ್ತು ದಿಟ್ಟ ರಾಜಕಾರಣಿಯಾಗಿದ್ದರು. ಅವರ ಅಗಲುವಿಕೆಯು ಮಹಾರಾಷ್ಟ್ರ ರಾಜಕಾರಣಕ್ಕೆ ದೊಡ್ಡ ನಷ್ಟವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

Published on: Jan 28, 2026 12:19 PM