ಮೈಸೂರು ಅರಮನೆ ಬಳಿ ಭಾರಿ ಭದ್ರತಾ ಲೋಪ? ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾ ಇದ್ದರೂ ಸೆರೆಯಾಗಿಲ್ಲ ಸ್ಫೋಟದ ದೃಶ್ಯ!

Edited By:

Updated on: Dec 27, 2025 | 11:01 AM

ಮೈಸೂರು ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ. ಘಟನೆ ನಡೆದ ಸ್ಥಳದಲ್ಲೇ ಸಲೀಂ ಸಾವನ್ನಪ್ಪಿದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮಂಜುಳಾ ಮತ್ತು ಲಕ್ಷ್ಮೀ ಮೃತಪಟ್ಟಿದ್ದಾರೆ. ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳಿದ್ದರೂ ಘಟನೆಯ ದೃಶ್ಯಗಳು ಸೆರೆಯಾಗದಿರುವುದು ಭದ್ರತಾ ಲೋಪದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮೈಸೂರು, ಡಿಸೆಂಬರ್ 27: ಕ್ರಿಸ್ಮಸ್ ದಿನ ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಮುಂಭಾಗದಲ್ಲಿ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟ ಘಟನೆಯಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿದೆ. ಬಲೂನು ಮಾರಾಟಗಾರ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಂಜನಗೂಡು ಮೂಲದ ಮಂಜುಳಾ ಹಾಗೂ ಬೆಂಗಳೂರು ಮೂಲದ ಲಕ್ಷ್ಮೀ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಘಟನೆ ನಡೆದ ಸ್ಥಳದ ಸಮೀಪವೇ ಅಳವಡಿಸಲಾಗಿದ್ದ ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾದಲ್ಲಿ ಘಟನೆಯ ಯಾವುದೇ ದೃಶ್ಯ ಸೆರೆಯಾಗದಿರುವುದು ಅಚ್ಚರಿ ಮೂಡಿಸಿದೆ. 360 ಡಿಗ್ರಿ ಕ್ಯಾಮರಾ ಅದಾಗಿದ್ದು, ಘಟನೆ ಸಮಯದಲ್ಲಿ ಬೇರೆ ಭಾಗವನ್ನು ಸೆರೆ ಹಿಡಿಯುತ್ತಿತ್ತು ಎಂದು ಮಾಹಿತಿ ಲಭ್ಯವಾಗಿದೆ. ಅರಮನೆಯ ಭದ್ರತೆಗಾಗಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಕ್ಯಾಮರಾಗಳನ್ನು ಅಳವಡಿಸಿದ್ದರೂ, ನಿರ್ಣಾಯಕ ಸಮಯದಲ್ಲಿ ದೃಶ್ಯಗಳು ಲಭ್ಯವಾಗದಿರುವುದು ಭದ್ರತಾ ಲೋಪದ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ರಾಜ್ಯ ಗೃಹ ಇಲಾಖೆ ಹಾಗೂ ಮೈಸೂರು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಎನ್ಐಎ ಸಹ ಮಾಹಿತಿ ಕಲೆ ಹಾಕುತ್ತಿದೆ. ಈ ಘಟನೆಯು ಅರಮನೆಯ ಭದ್ರತಾ ವ್ಯವಸ್ಥೆಯ ಬಗ್ಗೆ ಕಳವಳ ಹುಟ್ಟುಹಾಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 27, 2025 10:55 AM