ಜಿಟಿ ಮಾಲ್​ನಲ್ಲಿ ಅನ್ನದಾತನಿಗೆ ಪ್ರವೇಶ ನಿರಾಕರಣೆ, ಕ್ಷಮೆಯಾಚಿಸಿದ ಮಾಲ್ ಮ್ಯಾನೇಜರ್

|

Updated on: Jul 17, 2024 | 3:09 PM

ಮಾಲ್ ನವರು ತಪ್ಪನ್ನೆಲ್ಲ ಸೆಕ್ಯೂರಿಟಿ ಗಾರ್ಡ್ ಮೇಲೆ ಜಾರಿಸುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಮಾಲ್ ಮ್ಯಾನೇಜರ್ ಅಥವಾ ಮಾಲೀಕರ ಸೂಚನೆ ಮೇರೆಗಷ್ಟೇ ಅವನು ದೇಶದ ಅನ್ನದಾತನಿಗೆ ಪ್ರವೇಶ ನಿರಾಕರಿಸಿರುತ್ತಾನೆ. ಸುರೇಶ್ ಅದನ್ನು ಅಡ್ಮಿಟ್ ಮಾಡದೆ ಭದ್ರತಾ ಸಿಬ್ಬಂದಿ ಮೇಲೆ ತಪ್ಪು ಹೊರೆಸಿ, ಕ್ಷಮೆಯಾಚಿಸಿ ಬಚಾವಾಗುತ್ತಾರೆ.

ಬೆಂಗಳೂರು: ನಗರದ ಜಿಟಿ ರಸ್ತೆಯಲ್ಲಿರುವ ಜಿಟಿ ಮಾಲ್ ನವರು ಪಂಚೆಯುಟ್ಟು ಬಂದಿದ್ದ ಒಬ್ಬ ರೈತನಿಗೆ ಪ್ರವೇಶ ನಿರಾಕರಿಸಿದ್ದಕ್ಕೆ ದೊಡ್ಡ ಬೆಲೆ ತೆರುತ್ತಿದ್ದಾರೆ. ನಾಡಿನ ರೈತಾಪಿ ಸಮುದಾಯ ಮಾಲ್ ಮಾಲೀಕ ಮತ್ತು ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದೆ. ಬೇರೆ ಸಂಘಟನೆ ಮತ್ತು ಸಾರ್ವಜನಿಕರು ಸಹ ಮಾಲ್ ನ ದುರ್ವರ್ತನೆಯನ್ನು ಕಟುವಾದ ಶಬ್ದಗಳಲ್ಲಿ ಖಂಡಿಸುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ನಮ್ಮ ಬೆಂಗಳೂರು ವರದಿಗಾರ ಮಾಲ್ ಉಸ್ತುವಾರಿಯಾಗಿರುವ ಸುರೇಶ್ ಎನ್ನುವವರನ್ನು ಮಾತಾಡಿಸಿದಾಗ ಅವರು ನಡೆದ ಅಚಾತುರ್ಯಕ್ಕೆ ವಿಷಾದ ವ್ಯಕ್ತಪಡಿಸಿ ಕೈಮುಗಿಯುತ್ತಾ ರೈತನ ಕ್ಷಮೆಯಾಚಿಸಿದರು. ಸೆಕ್ಯೂರಿಟಿ ಗಾರ್ಡ್ ನ ಅವಿವೇಕತನದಿಂದ ನಡೆದಿರುವ ಘಟನೆ ಇದು, ಅವನ ವಿಚಾರಣೆ ನಡೆಸಿ ಕೆಲಸದಿಂದ ತೆಗೆದು ಹಾಕಲಾಗಿದೆ, ನಮ್ಮಲ್ಲಿ ಯಾವುದೇ ತೆರನಾದ ಡ್ರೆಸ್ ಕೋಡ್ ಇಲ್ಲ, ಬೇರೆ ಜನ ಬರ್ಮುಡಾಗಳಲ್ಲಿ ಬರುತ್ತಾರೆ, ಯಾರನ್ನೂ ತಡೆಯುವ ಪರಿಪಾಠ ನಮ್ಮಲ್ಲಿಲ್ಲ ಎಂದು ಹೇಳಿದ ಸುರೇಶ್ ಇಡೀ ರೈತ ಸಮುದಾಯದ ಕ್ಷಮೆ ಯಾಚಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪಂಚೆ ಹಾಕೊಂಡು ಬಂದಿದ್ದ ರೈತನನ್ನು ಒಳಗೆ ಬಿಡದ ಜಿಟಿ ಮಾಲ್ ಸಿಬ್ಬಂದಿ, ವಿಡಿಯೋ ನೋಡಿ