ಮಂಗಳೂರು: ನೀಟ್​​ ಪರೀಕ್ಷೆಯಲ್ಲಿ ದೇಶಕ್ಕೆ 3ನೇ ಸ್ಥಾನ ಪಡೆದ ಕೃಶಾಂಗ್ ಜೋಶಿ ಹೇಳಿದ್ದಿಷ್ಟು

Updated on: Jun 15, 2025 | 7:58 AM

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಟ್ ಯುಜಿ 2025 ಫಲಿತಾಂಶ ಪ್ರಕಟವಾಗಿದ್ದು, ಉತ್ತರಾಖಂಡ ಮೂಲದ ಕೃಶಾಂಗ್ ಜೋಶಿ ದೇಶದಲ್ಲಿ 3ನೇ ರ್ಯಾಂಕ್ ಪಡೆದಿದ್ದಾರೆ. ಅವರ ತಂದೆ ನವ ಮಂಗಳೂರು ಬಂದರು ಸಂಘದಲ್ಲಿ ಉಪ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃಶಾಂಗ್ ಮಹಾರಾಷ್ಟ್ರದಿಂದ ಪರೀಕ್ಷೆ ಬರೆದಿದ್ದಾರೆ ಮತ್ತು ಹತ್ತನೇ ತರಗತಿಯಿಂದಲೇ ವೈದ್ಯರಾಗುವ ಆಸೆ ಹೊಂದಿದ್ದರು.

ಮಂಗಳೂರು, ಜೂನ್​ 15: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET UG 2025ರ ಫಲಿತಾಂಶ ಶನಿವಾರ ಪ್ರಕಟವಾಗಿದೆ. ದೇಶದಾದ್ಯಂತ ಒಟ್ಟು 12.36 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಉತ್ತರಾಖಂಡ ಮೂಲದ ಕೃಶಾಂಗ್ ಜೋಶಿ ಎಂಬ ವಿದ್ಯಾರ್ಥಿ ಮೊದಲ ಪ್ರಯತ್ನದಲ್ಲೇ ನೀಟ್​ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ 3ನೇ ರ‍್ಯಾಂಕ್ ​ಪಡೆದಿದ್ದಾರೆ. ಇವರ ತಂದೆ ನವ ಮಂಗಳೂರು ಬಂದರು ಸಂಘದ ಉಪ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿದ್ಯಾರ್ಥಿ ಕೃಶಾಂಗ್ ಜೋಶಿ ಹೇಳಿದ್ದಿಷ್ಟು

ಮಾಧ್ಯಮದವರೊಂದಿಗೆ ಮಾತನಾಡಿರುವ ಕೃಶಾಂಗ್ ಜೋಶಿ, ನಾನು ಮೂಲತಃ ಉತ್ತರಾಖಂಡ ರಾಜ್ಯದವನು. ಆದರೆ ನಾನು ಮಹಾರಾಷ್ಟ್ರದಿಂದ ನೀಟ್ ಪರೀಕ್ಷೆ ಬರೆದೆ. ನನ್ನ ತಂದೆ ನವ ಮಂಗಳೂರು ಬಂದರು ಸಂಘದಲ್ಲಿ ಉಪ ಸಂರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನನ್ನ ತಾಯಿ ಗೃಹಿಣಿಯಾಗಿದ್ದಾರೆ. ಹತ್ತನೇ ತರಗತಿಯಿಂದಲೂ ವೈದ್ಯನಾಗುವ ಆಸೆ ಇದೆ. ಏಕೆಂದರೆ ನನ್ನ ಪೋಷಕರು ಹೇಳುವಂತೆ, ಇದೊಂದು ಮಹತ್ವದ ವೃತ್ತಿ, ಸ್ವತಂತ್ರವಾಗಿ ಕೆಲಸ ಮಾಡಬಹುದು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಬಹುದು. ನನಗೆ 50ರ ಒಳಗೆ ರ‍್ಯಾಂಕ್ ಬರಬಹುದು ಎಂದುಕೊಂಡಿದೆ. ಮೂರನೇ ರ‍್ಯಾಂಕ್ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.