ಹುಬ್ಬಳ್ಳಿಯ ಜೈನ ಮಂದಿರದಲ್ಲಿ ದರೋಡೆ: ಮುಸುಕುಧಾರಿಗಳಿಂದ ದೇವರ ಕಿರೀಟ, ಚಿನ್ನಾಭರಣ ಲೂಟಿ, ಮೂರ್ತಿ ಧ್ವಂಸ!
ಹುಬ್ಬಳ್ಳಿಯ ದಾದಾವಾಡಿ ಶ್ರೀ ಆದಿನಾಥ ಜೈನ ಮಂದಿರದಲ್ಲಿ ಮುಸುಕುಧಾರಿಗಳಿಂದ ಕಳ್ಳತನ ನಡೆದಿದೆ. ಮೂವರು ಕಳ್ಳರು ರಾಡ್ ಬಳಸಿ ದ್ವಾರ ಮುರಿದು ಒಳನುಗ್ಗಿ, ದೇವರ ಚಿನ್ನಾಭರಣ, ಬೆಳ್ಳಿ ಮತ್ತು ನಗದನ್ನು ದೋಚಿದ್ದಾರೆ. ಮೂರ್ತಿಗೂ ಹಾನಿಯಾಗಿದ್ದು, ಇದು ಮೂರನೇ ಬಾರಿಗೆ ನಡೆದ ಕಳ್ಳತನವಾಗಿದೆ. ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ, ಅಕ್ಟೋಬರ್ 05: ಹುಬ್ಬಳ್ಳಿಯ ಜೈನ ಮಂದಿರದಲ್ಲಿ ಭಾರಿ ಕಳ್ಳತನ ನಡೆದಿದೆ. ದಾದಾವಾಡಿ ಶ್ರೀ ಆದಿನಾಥ ಜೈನ ಮಂದಿರದಲ್ಲಿ ಮೂವರು ಮುಸುಕುಧಾರಿ ಖದೀಮರು ಕಳ್ಳತನ ಎಸಗಿದ್ದಾರೆ. ರಾಡ್ನ ಬಳಸಿ ಮಂದಿರದ ದ್ವಾರವನ್ನು ಮುರಿದು ಒಳನುಗ್ಗಿದ ಕಳ್ಳರು, ದೇವಸ್ಥಾನದಲ್ಲಿದ್ದ ಅಮೂಲ್ಯ ವಸ್ತುಗಳನ್ನು ದೋಚಿದ್ದಾರೆ.
ದೇವರಿಗೆ ಅಳವಡಿಸಿದ್ದ ಕಿರೀಟ, ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ನಗದನ್ನು ಕದ್ದೊಯ್ದಿದ್ದಾರೆ. ದುಷ್ಕರ್ಮಿಗಳು ಕಳ್ಳತನದ ವೇಳೆ ಮೂರ್ತಿಗೂ ಹಾನಿ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ಇದು ಆದಿನಾಥ ಜೈನ ಮಂದಿರದಲ್ಲಿ ನಡೆದ ಮೂರನೇ ಕಳ್ಳತನ ಪ್ರಕರಣವಾಗಿದೆ. 2025ರಲ್ಲೂ ಇದೇ ಮಂದಿರದಲ್ಲಿ ಕಳ್ಳತನ ನಡೆದಿತ್ತು ಎಂದು ವರದಿಯಾಗಿದೆ.
ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪದೇ ಪದೇ ಇದೇ ಮಂದಿರದಲ್ಲಿ ಕಳ್ಳತನಗಳು ಮರುಕಳಿಸುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳರನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಕಾರಿಯಾಗಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
