ಗುಬ್ಬಿಯಲ್ಲಿ ಶ್ರೀರಾಮನ ಮುತ್ತಿನ ಪಲ್ಕಕ್ಕಿ ಉತ್ಸವದಲ್ಲಿ ಪಾಲ್ಗೊಂಡವರಿಗೆ ಮುಸ್ಲಿಂ ಸಮುದಾಯವರಿಂದ ತಂಪು ಪಾನೀಯ ಸರಬರಾಜು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 14, 2022 | 8:27 PM

ಗುಬ್ಬಿಯ ಭಜರಂಗದಳ ಕಾರ್ಯಕರ್ತರು ಶ್ರೀರಾಮನ ಮುತ್ತಿನ ಪಲ್ಕಕ್ಕಿ ಉತ್ಸವ ಆಯೋಜಿದ್ದರು. ಈ ಶೋಭಾಯಾತ್ರೆಯಲ್ಲಿ ಮುಸ್ಲಿಂ ಸಮುದಾಯದ ಜನ ತಮ್ಮ ಹೆಗಲು ಮೇಲೆ ಕೇಸರಿ ಶಾಲು ಹೊದ್ದು ಭಾಗವಹಿಸಿದ್ದರು.

ಗುಬ್ಬಿ: ಬುಧವಾರದಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmed) ಅವರು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ವರಿಷ್ಠ ನಾಯಕ ಬಿ ಎಸ್ ಯಡಿಯೂರಪ್ಪನವರನ್ನು (BS Yediyurappa) ಮುಕ್ತವಾಗಿ ಕೊಂಡಾಡಿ ಅವರೊಬ್ಬ ಸೆಕ್ಯುಲರ್ ಮನೋಭಾವದ ನಾಯಕ ಅಂತ ಹೇಳುವ ಜೊತೆಗೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಒಮ್ಮೆಯೂ ಕೋಮುಗಲಭೆ ನಡೆದಿರಲಿಲ್ಲ ಎಂದಿದ್ದರು. ಕಳೆದ ಕೆಲ ತಿಂಗಳುಗಳಿಂದ ಒಂದಿಲ್ಲೊಂದು ಸಂಘರ್ಷ ಕಾಣುತ್ತಿದ್ದ ರಾಜ್ಯದಲ್ಲಿ ಪರಿಸ್ಥಿತಿ ಕ್ರಮೇಣ ತಿಳಿಯಾಗುತ್ತಿದೆ ಮಾರಾಯ್ರೇ. ಗುಬ್ಬಿಯಿಂದ (Gubbi) ಲಭ್ಯವಾಗಿರುವ ಈ ವಿಡಿಯೋ ನೋಡಿ. ನಿಸ್ಸಂದೇಹವಾಗಿ ಈ ಊರಿನ ಜನ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ (harmony) ನಿದರ್ಶನ ತೋರಿದ್ದಾರೆ. ಎಲ್ಲ ಕಡೆ ಎರಡೂ ಧರ್ಮಗಳ ಜನರು ಹೀಗೆ ವರ್ತಿಸಿದರೆ ಗಲಭೆಗಳು ಉದ್ಭವಿಸುವುದು ನಿಂತುಹೋಗುತ್ತದೆ.

ಗುಬ್ಬಿಯ ಭಜರಂಗದಳ ಕಾರ್ಯಕರ್ತರು ಶ್ರೀರಾಮನ ಮುತ್ತಿನ ಪಲ್ಕಕ್ಕಿ ಉತ್ಸವ ಆಯೋಜಿದ್ದರು. ಈ ಶೋಭಾಯಾತ್ರೆಯಲ್ಲಿ ಮುಸ್ಲಿಂ ಸಮುದಾಯದ ಜನ ತಮ್ಮ ಹೆಗಲು ಮೇಲೆ ಕೇಸರಿ ಶಾಲು ಹೊದ್ದು ಭಾಗವಹಿಸಿದ್ದರು. ಕೇವಲ ಭಾಗವಹಿಸಿದ್ದು ಮಾತ್ರ ಅಲ್ಲ, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಹಿಂದೂ ಕಾರ್ಯಕರ್ತರಿಗೆ ಮಜ್ಜಿಗೆ ಮತ್ತು ಪಾನಕವನ್ನು ಸರಬರಾಜು ಮಾಡಿದರು.

ಮುಸಲ್ಮಾನರ ರಂಜಾನ್ ತಿಂಗಳು ಈಗ ಜಾರಿಯಲ್ಲಿದೆ. ಈ ತಿಂಗಳಲ್ಲಿ ಅವರು ಉಪವಾಸ ಆಚರಿಸುತ್ತಾರೆ. ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ವಯೋವೃದ್ಧವರೆಗೆ ಎಲ್ಲರೂ ಉಪವಾಸ ಆಚರಿಸುತ್ತಾರೆ. ಸೂರ್ಯ ಮೂಡುವ ಸಮಯದಿಂದ ಹಿಡಿದು ಸೂರ್ಯ ಮುಳುಗುವವರಗೆ ಅವರು ಒಂದೇ ಒಂದು ಹನಿ ನೀರನ್ನು ಸಹ ಬಾಯೊಳಗೆ ಹಾಕುವುದಿಲ್ಲ. ಉಪವಾಸ ಮಾಡುವರು ತಲೆ ಮೇಲೆ ಅವರ ಸಂಪ್ರದಾಯದ ಟೋಪಿ ಧರಿಸಿರುತ್ತಾರೆ. ಈ ವಿಡಿಯೋನಲ್ಲಿ ಹಿಂದೂ ಸಮುದಾಯದವರಿಗೆ ತಂಪು ಪಾನೀಯ ಸರಬರಾಜು ಮಾಡುತ್ತಿರುವವರೆಲ್ಲ ತಲೆ ಮೇಲೆ ಟೋಪಿ ಧರಿಸಿದ್ದಾರೆ.

ಅದರರ್ಥ ಅವರೆಲ್ಲ ಉಪವಾಸ ಮಾಡುತ್ತಿದ್ದರೂ ಬಿಸಲಲ್ಲಿ ನಿಂತುಕೊಂಡು, ಶೋಭಾಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಪಾನೀಯ ನೀಡುತ್ತಿದ್ದಾರೆ. ಇದು ಬಹಳ ಒಳ್ಳೆಯ ಬೆಳವಣಿಗೆ. ನಮ್ಮ ದೇಶ ಇಂಥ ಭಾವೈಕ್ಯತೆ, ಸೌಹಾರ್ದತೆಗೆ ಮತ್ತು ಪರಸ್ಪರ ಗೌರವಾದರಗಳಿಗೆ ಹೆಸರಾಗಿದೆ.

ಇದನ್ನೂ ಓದಿ:  ‘ಕೆಜಿಎಫ್​ 2’ ಎಡಿಟರ್​ ವಯಸ್ಸು ಕೇವಲ 20 ವರ್ಷ; ಫ್ಯಾನ್​ ಮೇಡ್ ವಿಡಿಯೋ ಮಾಡಿದ್ದಕ್ಕೆ ಸಿಕ್ತು ಚಾನ್ಸ್

Published on: Apr 14, 2022 08:04 PM