ಮುಂಬೈ ಇಂಡಿಯನ್ಸ್​ ಸೋಲಿಗೆ ಕಾರಣವಾಯ್ತು ಈ ಒಂದು ‘ಎಡವಟ್ಟು’

Updated on: May 11, 2026 | 11:20 AM

Tilak Varma and Naman Dhir Catch: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2026) 54ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 167 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್​ಗಳಲ್ಲಿ 168 ರನ್ ಬಾರಿಸಿ ರೋಚಕ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್​ಸಿಬಿ ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಕ್ರಿಕೆಟ್ ಅಂಗಳದಲ್ಲಿ ಕ್ಷಣಕ್ಷಣಕ್ಕೂ ರೋಚಕತೆ! ಒಂದೆಡೆ ಅದ್ಭುತ ಫೀಲ್ಡಿಂಗ್ ಸಾಹಸ, ಇನ್ನೊಂದೆಡೆ ಸಹ ಆಟಗಾರರ ನಡುವೆಯೇ ಕಿತ್ತಾಟ. ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಅಭಿಮಾನಿಗಳು ಕಂಡಿದ್ದು ಬರೀ ಕ್ರಿಕೆಟ್ ಮಾತ್ರವಲ್ಲ, ಮೈದಾನದಲ್ಲಿ ಮಿಂಚಿನಂತೆ ಸಂಭವಿಸಿದ ನಾಟಕೀಯ ಬೆಳವಣಿಗೆಗಳು!

ನಮನ್ ಧೀರ್ ಮತ್ತು ತಿಲಕ್ ವರ್ಮಾ ನಡುವಿನ ಆ ಒಂದು ‘ತಪ್ಪು ಗ್ರಹಿಕೆ’ ಇಡೀ ಪಂದ್ಯದ ಗತಿಯನ್ನೇ ಬದಲಿಸಿತು ಎಂದರೆ ತಪ್ಪಾಗಲಾರದು. ಅಷ್ಟಕ್ಕೂ ಬೌಂಡರಿ ಲೈನ್ ಬಳಿ ನಡೆದ ಆ ಹೈ-ಡ್ರಾಮಾ ಏನು? ಇಲ್ಲಿ ಯಾರದ್ದು ತಪ್ಪು? ಇಲ್ಲಿದೆ ಸಂಪೂರ್ಣ ಮಾಹಿತಿ…

ಪಂದ್ಯದ 18ನೇ ಓವರ್‌ನಲ್ಲಿ ಆರ್‌ಸಿಬಿ ಬ್ಯಾಟರ್ ಕೃನಾಲ್ ಪಾಂಡ್ಯ ಹೊಡೆದ ಚೆಂಡನ್ನು ಬೌಂಡರಿ ಗೆರೆಯ ಬಳಿ ನಮನ್ ಧೀರ್ ಅದ್ಭುತವಾಗಿ ಹಿಡಿದರು. ಆದರೆ ಚೆಂಡು ಹಿಡಿದ ಬೆನ್ನಲ್ಲೇ ನಿಯಂತ್ರಣ ಕಳೆದುಕೊಂಡ  ನಮನ್​ ಧೀರ್ ಇನ್ನೇನು ಬೌಂಡರಿ ದಾಟಬೇಕು ಅನ್ನುವಷ್ಟರಲ್ಲಿ, ಚೆಂಡನ್ನು ಹತ್ತಿರವೇ ಇದ್ದ ತಿಲಕ್ ವರ್ಮಾ ಕಡೆಗೆ ಎಸೆದರು.

ಆದರೆ, ನಮನ್ ಅವರ ಕಾಲು ಬೌಂಡರಿ ಲೈನ್ ಮುಟ್ಟಿದೆ ಎಂದು ಭಾವಿಸಿದ ತಿಲಕ್ ವರ್ಮಾ, ಚೆಂಡನ್ನು ಹಿಡಿಯಲು ಪ್ರಯತ್ನಿಸಲೇ ಇಲ್ಲ! ಈ ತಪ್ಪು ಗ್ರಹಿಕೆಯು ಮುಂಬೈ ಇಂಡಿಯನ್ಸ್ ಪಾಲಿಗೆ ಮುಳುವಾಯ್ತು. ಏಕೆಂದರೆ  ರಿಪ್ಲೇನಲ್ಲಿ ನಮನ್ ಧೀರ್ ಕಾಲು ಬೌಂಡರಿ ಗೆರೆಗೆ ತಾಗಿಲ್ಲ ಎಂಬುದು ಸ್ಪಷ್ಟವಾಯಿತು. ತಿಲಕ್ ವರ್ಮಾ ಅವರ ನಿರ್ಲಕ್ಷ್ಯದಿಂದಾಗಿ ಒಂದು ಸುಲಭದ ವಿಕೆಟ್ ಕೈತಪ್ಪಿತು.

ಇದರಿಂದ ಕೋಪಗೊಂಡ ನಮನ್ ಧೀರ್ ಮೈದಾನದಲ್ಲೇ ತಿಲಕ್ ಮೇಲೆ ವಾಕ್ಸಮರ ನಡೆಸಿದರು. ಇಬ್ಬರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಆ ಬಳಿಕ ನಮನ್​ ಧೀರ್​ಗೆ ಹಸ್ತಲಾಘವ ನೀಡಿ ತಿಲಕ್ ವರ್ಮಾ ಗೊಂದಲವನ್ನು ಬಗೆಹರಿಸಿಕೊಂಡರು.

ಆದರೆ ಈ ಒಂದು ಕ್ಯಾಚ್ ತಪ್ಪಿದ್ದು ಮುಂಬೈ ಇಂಡಿಯನ್ಸ್ ಪಾಲಿಗೆ ದುಬಾರಿಯಾಯಿತು. ಏಕೆಂದರೆ ಮರು ಎಸೆತದಲ್ಲೇ ಕೃನಾಲ್ ಪಾಂಡ್ಯ ಸಿಕ್ಸರ್ ಸಿಡಿಸಿದ್ದರು. ಇದಾಗ್ಯೂ ಅದೇ ಓವರ್​ನ ಕೊನೆಯ ಎಸೆತದಲ್ಲಿ ತಿಲಕ್ ವರ್ಮಾ ಗಾಳಿಯಲ್ಲಿ ಹಾರಿ ಅದ್ಭುತವಾದ ‘ಜಗ್ಲಿಂಗ್ ಕ್ಯಾಚ್’ ಹಿಡಿದರು.

ಅಷ್ಟರಲ್ಲಾಗಲೇ ಪಂದ್ಯವು ಆರ್​ಸಿಬಿ ಕಡೆಗೆ ವಾಲಿತ್ತು. ಅಂತಿಮವಾಗಿ ಕೊನೆಯ ಓವರ್​ನಲ್ಲಿ 15 ರನ್ ಬಾರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

 

 

Published on: May 11, 2026 11:18 AM
Follow Us