ಮೊದಲ ಓವರ್ನಲ್ಲೇ ತೂಫಾನ್… ಹೊಸ ಇತಿಹಾಸ ನಿರ್ಮಾಣ
Royal Challengers Bengaluru Women vs Gujarat Giants Women: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಗುಜರಾತ್ ಜೈಂಟ್ಸ್ 18.5 ಓವರ್ಗಳಲ್ಲಿ 150 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಆರ್ಸಿಬಿ 32 ರನ್ಗಳ ಜಯ ಸಾಧಿಸಿದೆ.
ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಮೊದಲ ಓವರ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದೆ. ಅದು ಕೂಡ ಬರೋಬ್ಬರಿ 23 ರನ್ಗಳಿಸುವ ಮೂಲಕ.
ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡವು ಪ್ರಥಮ ಓವರ್ನಲ್ಲಿ ಬರೋಬ್ಬರಿ 23 ರನ್ ಕಲೆಹಾಕಿತು. ಹೀಗೆ 23 ರನ್ ಬಿಟ್ಟು ಕೊಟ್ಟಿರುವುದು ಆರ್ಸಿಬಿ ತಂಡದ ಮಾಜಿ ವೇಗಿ ರೇಣುಕಾ ಸಿಂಗ್ ಠಾಕೂರ್.
ಗುಜರಾಜ್ ಜೈಂಟ್ಸ್ ಪರ ಮೊದಲ ಓವರ್ ಎಸೆದ ರೇಣುಕಾ ಸಿಂಗ್ ಮೊದಲ ಎಸೆತದಲ್ಲೇ ವೈಡ್ ಎಸೆದರು. ಈ ಚೆಂಡು ವಿಕೆಟ್ ಕೀಪರ್ನ ವಂಚಿಸಿ ಬೌಂಡರಿ ಲೈನ್ ದಾಟಿತು. ಇದಾದ ಬಳಿಕ ಆರ್ಸಿಬಿ ಬ್ಯಾಟರ್ ಗ್ರೇಸ್ ಹ್ಯಾರಿಸ್ ಹ್ಯಾಟ್ರಿಕ್ ಫೋರ್ ಬಾರಿಸಿದರು. ಇದರ ಜೊತೆಗೆ ರೇಣುಕಾ ಮತ್ತೆರಡು ವೈಡ್ಗಳನ್ನು ಎಸೆದರು. ಇನ್ನು ಕೊನೆಯ ಎಸೆತದಲ್ಲಿ ಹ್ಯಾರಿಸ್ ಮತ್ತೊಂದು ಫೋರ್ ಬಾರಿಸಿದರು.
ಹೀಗೆ ಮೊದಲ ಓವರ್ನಲ್ಲಿ ಬರೋಬ್ಬರಿ 23 ರನ್ ನೀಡುವ ಮೂಲಕ ರೇಣುಕಾ ಸಿಂಗ್ ಠಾಕೂರ್ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ದುಬಾರಿ ಪ್ರಥಮ ಓವರ್ ಎಸೆದ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ಹೀನಾಯ ದಾಖಲೆ ತನುಜಾ ಕನ್ವರ್ ಹೆಸರಿನಲ್ಲಿತ್ತು.
2023 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಪರ ಮೊದಲ ಓವರ್ ಎಸೆದ ತನುಜಾ ಕನ್ವರ್ 21 ರನ್ ನೀಡುವ ಮೂಲಕ ಅನಗತ್ಯ ದಾಖಲೆ ನಿರ್ಮಿಸಿದ್ದರು. ಇದೀಗ 23 ರನ್ ಬಿಟ್ಟು ಕೊಟ್ಟು ರೇಣುಕಾ ಸಿಂಗ್ ಠಾಕೂರ್ ಹೀನಾಯ ದಾಖಲೆಗೆ ಕೊರೊಳೊಡ್ಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಗುಜರಾತ್ ಜೈಂಟ್ಸ್ 18.5 ಓವರ್ಗಳಲ್ಲಿ 150 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಆರ್ಸಿಬಿ 32 ರನ್ಗಳ ಜಯ ಸಾಧಿಸಿದೆ.