ರೈತರ ಕಷ್ಟ ಗೊತ್ತೇನ್ರೀ? ಎಸಿ ರೂಮಲ್ಲಿ ಕುಳಿತುಕೊಂಡು ರೈತರ ಕಷ್ಟ ಕೇಳೋ ರಾಜಕಾರಣಿಗಳಿಗೆ ವಿದ್ಯಾರ್ಥಿನಿ ಖಡಕ್ ಪ್ರಶ್ನೆ
ಕಬ್ಬು ಬೆಳೆಗಾರರ ಹೋರಾಟಕ್ಕೆ ವಿದ್ಯಾರ್ಥಿನಿ ಧ್ವನಿಯಾಗಿದ್ದು, ಎಸಿ ರೂಂನಲ್ಲಿ ಕುಳಿತು ರೈತರ ಕಷ್ಟ ಅರ್ಥಮಾಡಿಕೊಳ್ಳುವುದಾಗಿ ಹೇಳುವ ರಾಜಕಾರಣಿಗಳಿಗೆ ಖಡಕ್ ಪ್ರಶ್ನೆ ಹಾಕಿದ್ದಾರೆ. ಮುಧೋಳದಲ್ಲಿ ಪ್ರತಿಭಟನಾಕಾರರ ಜತೆ ಸೇರಿ ಮಾತನಾಡಿದ ವಿದ್ಯಾರ್ಥಿನಿ, ಕಬ್ಬಿಗೆ ಪ್ರತಿ ಟನ್‌ಗೆ 3,500 ರೂಪಾಯಿ ನೀಡುವಂತೆ ಆಗ್ರಹಿಸಿದ್ದು, ಇದು ಕೇವಲ ಬೇಡಿಕೆಯಲ್ಲ, ರೈತರ ಹಕ್ಕು ಎಂದಿದ್ದಾರೆ.
ಬಾಗಲಕೋಟೆ, ನವೆಂಬರ್ 13: ಕ್ವಿಂಟಲ್ ಕಬ್ಬಿಗೆ 3,500 ರೂ. ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆಗೆ ಶಿರೋಳದ ರಮೇಶ್ ಗಡದನ್ನವರ ಹೈಸ್ಕೂಲ್ ವಿದ್ಯಾರ್ಥಿಗಳೂ ಬೆಂಬಲ ಸೂಚಿಸಿದ್ದಾರೆ. ಇದೇ ವೇಳೆ, ವಿದ್ಯಾರ್ಥಿನಿಯೊಬ್ಬರು ಆಕ್ರೋಶದಿಂದ ಮಾತನಾಡಿರುವುದು ಗಮನ ಸೆಳೆದಿದೆ. ರೈತರು ಹಗಲಿರುಳು ದುಡಿದು ಬೆಳೆ ಬೆಳೆದರೂ ಕಾರ್ಖಾನೆ ಮಾಲೀಕರು ಮತ್ತು ಸರ್ಕಾರ ಅವರ ಪರಿಶ್ರಮಕ್ಕೆ ತಕ್ಕ ಬೆಲೆ ನೀಡುತ್ತಿಲ್ಲ ಎಂದು ವಿದ್ಯಾರ್ಥಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರು ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿಗಳ ಬೆಲೆಯನ್ನು ಕೇಳುತ್ತಿದ್ದು, ಇದು ಅವರ ಹಕ್ಕು ಎಂದು ಪ್ರತಿಪಾದಿಸಿದ್ದಾರೆ. ರೈತರು ಸಾಲ ಮಾಡಿ ಕಬ್ಬು ಬೆಳೆಯುತ್ತಾರೆ, ಆದರೆ ಕೊನೆಗೆ ಅವರ ಕೈಗೆ ಏನೂ ಉಳಿಯುವುದಿಲ್ಲ. ಒಂದು ಕೆಜಿ ಸಕ್ಕರೆಗೆ 42 ರೂಪಾಯಿ ಸಿಗುವಾಗ, ಒಂದು ಟನ್ ಕಬ್ಬಿಗೆ 3,500 ರೂಪಾಯಿ ನೀಡುವುದು ನ್ಯಾಯಯುತವಾಗಿದೆ. ರೈತರ ತಾಳ್ಮೆಯನ್ನು ಪರೀಕ್ಷಿಸಬಾರದು ಎಂದು ವಿದ್ಯಾರ್ಥಿನಿ ಎಚ್ಚರಿಕೆ ನೀಡಿದ್ದಾರೆ.
