ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ಮೈಸೂರು ದಸರಾ 2026 ಅಂಗವಾಗಿ ಅರಮನೆಯಲ್ಲಿ ಆಯುಧ ಪೂಜೆಯ ಸಂಭ್ರಮ ಮನೆಮಾಡಿದೆ. ಬೆಳಗ್ಗೆಯಿಂದಲೇ ಚಂಡಿಕಾ ಹೋಮ, ಕೋಡಿ ಸೋಮೇಶ್ವರ ದೇಗುಲಕ್ಕೆ ಖಾಸಗಿ ಆಯುಧಗಳ ರವಾನೆ, ಪೂರ್ಣ ಕುಂಭ ಹೊತ್ತ ಮುತ್ತೈದೆಯರ ಮೆರವಣಿಗೆ, ರಾಜಪರಿವಾರದ ಉಪಸ್ಥಿತಿ, ಪಟ್ಟದ ಆನೆ, ಕುದುರೆ, ಒಂಟೆ, ಹಸುಗಳಿಗೆ ಪೂಜೆ ಸಲ್ಲಿಸಲಾಯಿತು. ಯದುವೀರ್ ಒಡೆಯರ್ ಅವರು ಧಾರ್ಮಿಕ ವಿಧಿವಿಧಾನಗಳಂತೆ ಪೂಜೆ ನೆರವೇರಿಸಿದರು.
ಮೈಸೂರು ದಸರಾ ಮಹೋತ್ಸವದ ಅಂಗವಾಗಿ, ಅರಮನೆಯಲ್ಲಿ ಆಯುಧ ಪೂಜೆಯು ವಿಜೃಂಭಣೆಯಿಂದ ನೆರವೇರಿತು. ಮಹಾನವಮಿ ದಿನದಂದು ರಾಜವಂಶದ ಪರಂಪರೆಯಂತೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಈ ಪೂಜೆಯನ್ನು ಆಯೋಜಿಸಲಾಗಿತ್ತು. ಬೆಳಗ್ಗೆ ಏಳು ಗಂಟೆಯಿಂದಲೇ ಚಂಡಿಕಾ ಹೋಮದೊಂದಿಗೆ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡವು.
ಬೆಳ್ಳಿ ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿಯನ್ನು ಹೊತ್ತು, ಪಟ್ಟದ ಆನೆ, ಕುದುರೆ, ಹಸುಗಳೊಂದಿಗೆ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಖಾಸಗಿ ಆಯುಧಗಳನ್ನು ಕೊಂಡೊಯ್ಯಲಾಯಿತು. ಅಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಶಸ್ತ್ರಾಸ್ತ್ರಗಳಿಗೆ ಎಣ್ಣೆ ಹಚ್ಚಿ, ಪೂರ್ಣ ಕುಂಭದೊಂದಿಗೆ ಅರಮನೆಗೆ ಮರಳಿ ಕರೆತರಲಾಯಿತು. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಈ ಆಯುಧಗಳಿಗೆ ಹಾಗೂ ಪಟ್ಟದ ಪ್ರಾಣಿಗಳಿಗೆ ಧಾರ್ಮಿಕ ವಿಧಿವಿಧಾನಗಳಂತೆ ಪೂಜೆ ಸಲ್ಲಿಸಿದರು. ಬಳಿಕ ರಾಜವಂಶಸ್ಥರು ಬಳಸಿದ್ದ ವಿಂಟೇಜ್ ಕಾರುಗಳಿಗೂ ಪೂಜೆ ಮಾಡಲಾಯಿತು. ಯುದ್ಧದಲ್ಲಿ ಬಳಸಿದ್ದ ಫಿರಂಗಿ ಗುಂಡುಗಳು ಸೇರಿದಂತೆ ಎಲ್ಲಾ ಶಸ್ತ್ರಾಸ್ತ್ರಗಳಿಗೂ ಗೌರವ ಸಮರ್ಪಿಸಲಾಯಿತು.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
