‘ನಮ್ಮ ಮೆಟ್ರೋ ಇರುವ ತನಕ ಅಪರ್ಣಾ ಧ್ವನಿ ಇರಬೇಕು’: ಸೃಜನ್​ ಲೋಕೇಶ್​ ಮನವಿ

|

Updated on: Jul 12, 2024 | 3:55 PM

ಕ್ಯಾನ್ಸರ್​ನಿಂದ ಅಪರ್ಣಾ ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ಮೊದಲು ಮೆಟ್ರೋ ಸಂಚಾರ ಆರಂಭ ಆದಾಗಿನಿಂದ ಇಂದಿನ ತನಕ ಎಲ್ಲ ನಿಲ್ದಾಣಗಳಲ್ಲಿ ಅಪರ್ಣಾ ಅವರ ಧ್ವನಿ ಕೇಳಿಸಿದೆ. ‘ಮುಂದಿನ ನಿಲ್ದಾಣ... ಬಾಗಿಲುಗಳು ಬಲಕ್ಕೆ ತೆರೆಯುತ್ತವೆ.. ರೈಲು ಹತ್ತುವ ಮತ್ತು ಇಳಿಯುವ ಮುನ್ನ ಅಂತರದ ಬಗ್ಗೆ ಗಮನವಿರಲಿ’ ಎಂದು ಹೇಳುವ ಅಪರ್ಣಾ ಅವರ ಧ್ವನಿ ಶಾಶ್ವತವಾಗಿ ಇರಲಿ ಎಂದು ಸೃಜನ್​ ಲೋಕೇಶ್​ ಮನವಿ ಮಾಡಿದ್ದಾರೆ.

‘ನಮ್ಮ ಮೆಟ್ರೋ’ದಲ್ಲಿ ಸಂಚರಿಸುವ ಕೋಟ್ಯಂತರ ಜನರಿಗೆ ಸೂಚನೆ ನೀಡುವ ಸುಮಧುರವಾದ ಧ್ವನಿ ಅಪರ್ಣಾ ವಸ್ತಾರೆ ಅವರದ್ದು. ಜುಲೈ 11ರಂದು ಅಪರ್ಣಾ ಅವರು ಕ್ಯಾನ್ಸರ್​​ನಿಂದ ಮೃತಪಟ್ಟರು ಎಂಬ ಸುದ್ದಿ ತಿಳಿದು ಆಪ್ತರಿಗೆ ಮತ್ತು ಅಭಿಮಾನಿಗಳಿಗೆ ನೋವಾಗಿದೆ. ತಮ್ಮ ಧ್ವನಿಯ ಮೂಲಕ ಅಪರ್ಣಾ ಅವರು ಪ್ರತಿಯೊಬ್ಬ ಮೆಟ್ರೋ ಪ್ರಯಾಣಿಕರಿಗೆ ಪರಿಚಯ ಆಗಿದ್ದರು. ಆ ಧ್ವನಿ ಎಂದೆಂದಿಗೂ ಕೇಳಿಸುತ್ತಲೇ ಇರಬೇಕು ಎಂಬುದು ಅನೇಕರ ಆಸೆ. ಈ ಬಗ್ಗೆ ನಟ ಸೃಜನ್​ ಲೋಕೇಶ್​ ಮಾತನಾಡಿದ್ದಾರೆ. ‘ಮೆಟ್ರೋ ಇರುವವರೆಗೂ ಅಪರ್ಣಾ ಅವರ ವಾಯ್ಸ್​ ಇರಬೇಕು ಎಂದು ಮಾಧ್ಯಮಗಳ ಮೂಲಕ ನಾನು ಮೆಟ್ರೋ ಅಧಿಕಾರಿಗಳ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಆ ಧ್ವನಿ ಬದಲಾಗಬಾರದು. ಜನರು ಅವರನ್ನು ಮರೆಯಬಾರದು. ಆ ಧ್ವನಿಯನ್ನು ಕೇಳಿದಾಗಲೆಲ್ಲ ಅಪರ್ಣಾ ಅವರ ಮುಖ ನಮ್ಮ ಕಣ್ಣ ಮುಂದೆ ಬರಬೇಕು’ ಎಂದು ಸೃಜನ್​ ಲೋಕೇಶ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.