ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಎಸ್ಕೇಪ್!: ಶಿವಕಾಳಿ ಸ್ವಾಮೀಜಿ ವಿರುದ್ಧ ಆರೋಪ
ಬಾಗಲಗುಂಟೆಯಲ್ಲಿ ಗೀತಾ ಎಂಬುವರ ಮನೆಯಲ್ಲಿ ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನಾಭರಣ ಹಾಗೂ 1.33 ಲಕ್ಷ ರೂಪಾಯಿ ನಗದು ಕಳ್ಳತನ ನಡೆದಿದೆ. ಮಗಳ ಸಂಸಾರದಲ್ಲಿ ಬಿರುಕು ಮೂಡಿದ್ದರಿಂದ ಪರಿಹಾರಕ್ಕಾಗಿ ಸ್ವಾಮೀಜಿಯ ಮೊರೆ ಹೋಗಿದ್ದರು. ಪೂಜೆ ಮಾಡುವ ನೆಪದಲ್ಲಿ ಸ್ವಾಮೀಜಿ ಮಹಿಳೆಗೆ ಮೂರ್ಛೆ ಬರುವಂತೆ ಮಾಡಿ ಚಿನ್ನ, ನಗದು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲಮಂಗಲ, ಜುಲೈ 16: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಾಗಲಗುಂಟೆಯಲ್ಲಿ ಪೂಜೆ ನೆಪದಲ್ಲಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿರುವ ಪ್ರಕರಣ ವರದಿಯಾಗಿದೆ. ಗೀತಾ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ನಿತಿನಿ ಅಲಿಯಾಸ್ ಶಿವಕಾಳಿ ಸ್ವಾಮೀಜಿ ವಿರುದ್ಧ ಆರೋಪ ಕೇಳಿಬಂದಿದೆ. ಗೀತಾ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಅದಾಗಲೇ ಅವರಿಗೆ ಮದುವೆಯೂ ಆಗಿದೆ. ಈ ನಡುವೆ ಎರಡನೆ ಮಗಳ ಸಂಸಾರದಲ್ಲಿ ಆಗಾಗ ಜಗಳ ಹಿನ್ನೆಲೆ ಪರಿಚಯಸ್ಥರ ಮೂಲಕ ಶಿವಕಾಳಿ ಸ್ವಾಮೀಜಿಯನ್ನು ಗೀತಾ ಭೇಟಿಯಾಗಿದ್ದರು. ಆಗ ನಿಮ್ಮ ಅಳಿಯನಿಗೆ ಸಾವಿನ ಗಂಡಾಂತರವಿದೆ ಎಂದಿದ್ದ ಸ್ವಾಮೀಜಿ, ಯಾರು ಇಲ್ಲದ ವೇಳೆಯಲ್ಲಿ ಪೂಜೆ ಮಾಡಬೇಕು ಎಂದು ತಿಳಿಸಿದ್ದರು. ಸ್ವಾಮೀಜಿ ಮಾತನ್ನ ನಂಬಿ ಗೀತಾ ಒಬ್ಬರೇ ಇದ್ದ ಸಮಯದಲ್ಲಿ ಪೂಜೆ ನಡೆಸಲಾಗಿದ್ದು, ಪೂಜೆಗೆ ಒಡವೆ ನಗದು ಎಲ್ಲವನ್ನೂ ಇಡಿ ಎಂದು ಸ್ವಾಮೀಜಿ ತಿಳಿಸಿದ್ದರು. ಅದರಂತೆ 43 ಗ್ರಾಂ ಚಿನ್ನಾಭರಣ ಮತ್ತು 1 ಲಕ್ಷದ 30 ಸಾವಿರ ನಗದನ್ನು ಗೀತಾ ಇಟ್ಟಿದ್ದರು. ಆ ಬಳಿಕ ಬೂದಿ ಎರಚಿ ಬೆನ್ನ ಮೇಲೆ ಸ್ವಾಮೀಜಿ ಹೊಡೆದ ಪರಿಣಾಮ ಮಹಿಳೆ ಮೂರ್ಚೆ ತಪ್ಪಿ ಬಿದ್ದಿದ್ದಾರೆ. ಈ ವೇಳೆ ಹಣ, ಚಿನ್ನ ದೋಚಿ ಸ್ವಾಮೀಜಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
