ಬೈಕಿನ ಚೇನ್ ಸಾಕೆಟ್​ನಲ್ಲಿ ನುಸುಳಿದ್ದ ನಾಗರಹಾವನ್ನು ನೆಲಮಂಗಲದ ಉರಗ ತಜ್ಞ ಲೋಕೇಶ್ ರಕ್ಷಿಸಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 07, 2022 | 8:03 AM

ಉರಗ ತಜ್ಞರು ಹೀಗೆ ಜನರಿಂದ ಆತಂಕದ ಕರೆಗಳು ಬಂದಾತ ತಾವು ಬೇರೆ ಯಾವುದಾದರೂ ಕೆಲಸದಲ್ಲಿ ತೊಡಗಿದ್ದರೆ ಅದನ್ನು ಬದಿಗಿಟ್ಟು ಕರೆ ಬಂದ ಸ್ಥಳಕ್ಕೆ ಧಾವಿಸುತ್ತಾರೆ. ಈ ಗುಣ ಎಲ್ಲ ಉರಗ ತಜ್ಞರಲ್ಲಿ ನಾವು ನೋಡಬಹುದು.

Nelamangala: ಹಾವುಗಳು (snakes) ಮನೆ ಮುಂದೆ ಪಾರ್ಕ್ ಮಾಡಿದ ಕಾರುಗಳ ಬಾನಟ್ ಗಳಲ್ಲಿ ಸ್ಕೂಟರ್ ಗಳ ಡಿಕ್ಕಿಯಲ್ಲಿ ನುಸುಳಿ ಸುರುಳಿ ಸುತ್ತಿಕೊಂಡು ಪವಡಿಸುವುದು ಹೊಸದೇನಲ್ಲ. ಅಂಥ ಘಟನೆಗಳನ್ನು ನಾವು ಬಹಳ ಸಲ ನೋಡಿದ್ದೇವೆ. ಅದರೆ ದ್ವಿಚಕ್ರ ವಾಹನವೊಂದರ ಚೇನ್ ಸಾಕೆಟ್ ನಲ್ಲಿ ಹಾವು ಸೇರಿಕೊಳ್ಳುವುದು ಅಪರೂಪವೇ. ನೆಲಮಂಗಲದ (Nelamangala) ಬಿನ್ನಮಂಗಲದಲ್ಲಿ ಅಂಥದೊಂದು ಪ್ರಸಂಗ ಸೋಮವಾರ ಬೆಳಕಿಗೆ ಬಂದಿದೆ. ಚೇನ್ ಸಾಕೆಟ್ ನ ಕವರ್ ಬಿಚ್ಚುತ್ತಿರುವ ಇವರ ಹೆಸರು ಲೋಕೇಶ್ ಅದರೆ ಈ ಭಾಗದ ಜನರಿಗೆ ಅವರು ಸ್ನೇಕ್ ಲೋಕೇಶ್ (Snake Lokesh) ಅಂತಲೇ ಪರಿಚಿತರು.

ಮನೆಯೊಳಗೆ, ಹಿತ್ತಲೊಳಗೆ, ಸಂಪಿನ ಹತ್ತಿರ ಅಥವಾ ಹೀಗೆ ವಾಹನಗಳಲ್ಲಿ ಸೇರಿಕೊಂಡ ಹಲವಾರು ಹಾವುಗಳನ್ನು ರಕ್ಷಿಸಿ ಅವುಗಳ ನೈಸರ್ಗಿಕ ತಾಣ-ಕಾಡುಗಳಿಗೆ ಅವರು ಒಯ್ದು ಬಿಟ್ಟಿದ್ದಾರೆ.

ಅಂದಹಾಗೆ, ಟೂ ವ್ಹೀಲರ್ ಬಿನ್ನಮಂಗಲದ ರಾಘವೇಂದ್ರ ಅವರಿಗೆ ಸೇರಿದ್ದು. ಅವರರು ಸೋಮವಾರ ಬೆಳಗ್ಗೆ ಕೆಲಸಕ್ಕೆ ಹೊರಡಲು ಅಣಿಯಾಗಿ ಬೈಕ್ ಬಳಿಗೆ ಹೋದಾಗ ಅವರಿಗೆ ಚೇನ್ ಸಾಕೆಟ್ ನೊಳಗೆ ಹಾವು ನುಸುಳುವುದು ಕಾಣಿಸಿದೆ. ಇನ್ನು ಗಾಡಿಯ ಹತ್ತಿರಕ್ಕೆ ಅವರು ಹೇಗೆ ಹೋದಾರು? ಕೂಡಲೇ ಸ್ನೇಕ್ ಲೋಕೇಶ್ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.

ಉರಗ ತಜ್ಞರು ಹೀಗೆ ಜನರಿಂದ ಆತಂಕದ ಕರೆಗಳು ಬಂದಾತ ತಾವು ಬೇರೆ ಯಾವುದಾದರೂ ಕೆಲಸದಲ್ಲಿ ತೊಡಗಿದ್ದರೆ ಅದನ್ನು ಬದಿಗಿಟ್ಟು ಕರೆ ಬಂದ ಸ್ಥಳಕ್ಕೆ ಧಾವಿಸುತ್ತಾರೆ. ಈ ಗುಣ ಎಲ್ಲ ಉರಗ ತಜ್ಞರಲ್ಲಿ ನಾವು ನೋಡಬಹುದು. ಲೋಕೇಶ್ ಅವರು ರಾಘವೇಂದ್ರರಿಂದ ಕಾಲ್ ಬಂದ ಕ್ಷಣವೇ ಅಲ್ಲಿಗೆ ಹೋಗಿ ತಾವೇ ಚೇನ್ ಸಾಕೆಟ್ ಬಿಚ್ಚಿ 3-4 ಅಡಿ ಉದ್ದದ ನಾಗರಹಾವನ್ನು ರಕ್ಷಿಸಿದ್ದಾರೆ ಮತ್ತು ಅದನ್ನು ತೆಗೆದುಕೊಂಡು ಹೋಗಿ ಕಾಡಿಗೆ ಬಿಟ್ಟಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.