ಅಥಣಿ: ಮಕ್ಕಳು ಓದುವ ಶಾಲೆಗೆ ಮೇಲ್ಛಾವಣಿಯಾಗಿ ಹೊದಿಸಿದ್ದ ಶೀಟುಗಳು ಬಿರುಗಾಳಿ ಮತ್ತು ಮಳೆಗೆ ಹಾರಿಹೋಗಿವೆ

ಅಥಣಿ: ಮಕ್ಕಳು ಓದುವ ಶಾಲೆಗೆ ಮೇಲ್ಛಾವಣಿಯಾಗಿ ಹೊದಿಸಿದ್ದ ಶೀಟುಗಳು ಬಿರುಗಾಳಿ ಮತ್ತು ಮಳೆಗೆ ಹಾರಿಹೋಗಿವೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 06, 2022 | 10:06 PM

ಅಥಣಿಯನ್ನು ಜಿಲ್ಲಾ ಕೇಂದ್ರದ ದರ್ಜೆಗೇರಿಸಲು ಹೋರಾಟ ನಡೆಯುತ್ತಿದೆ. ಆದರೆ ಜಿಲ್ಲೆಯಲ್ಲಿ ಶಾಲೆಗಳ ಸ್ಥಿತಿ ಹೀಗಿದೆ. ಇಲ್ಲಿನ ಜನಪ್ರತಿನಿಧಿಗಳು ಮೂಲಭೂತ ಅವಶ್ಯಕತೆಗಳ ಬಗ್ಗೆ ಯೋಚಿಸಲು ಇದು ಸಕಾಲ.

ಬೆಳಗಾವಿಯಿಂದ ನಮಗೆ ಮತ್ತೊಂದು ವಿಡಿಯೋ ಲಭ್ಯವಾಗಿದೆ. ಜಿಲ್ಲೆಯ ಅಥಣಿ (Athani) ತಾಲ್ಲೂಕಿನ ಎರಡು ಗ್ರಾಮಗಳಲ್ಲಿರುವ ಶಾಲೆಗಳ ಸ್ಥಿತಿ ಏನಾಗಿದೆ ಅಂತ ನೋಡುತ್ತಿದ್ದರೆ ಭಯವೂ ಆಗುತ್ತದೆ ಮತ್ತು ಇಂಥ ಅಪಾಯಕಾರಿ ಶಾಲೆಗಳ ಒಳಗೆ ಶಿಕ್ಷಣ ಪಡೆಯಲು ಹೋಗುವ ಮಕ್ಕಳ ಸ್ಥಿತಿ ನೆನೆದು ದುಗುಡ ಮತ್ತು ದಿಗಿಲು ಸಹ ಆಗುತ್ತದೆ. ತಾಲ್ಲೂಕಿನ ಅನಂತಪುರ (Anantapur) ಮತ್ತು ಬೆಳ್ಳಿಗೇರಿ (Belligeri) ಗ್ರಾಮಗಳಲ್ಲಿರುವ ಸರ್ಕಾರೀ ಶಾಲೆಗಳಿವು. ರವಿವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಜೋರು ಮಳೆಗೆ ಶಾಲೆಗಳ ಮೇಲ್ಛಾವಣಿಗೆ ಹೊದಿಸಿದ್ದ ಅಸ್ಬೆಸ್ಟಸ್ ಶೀಟುಗಳು ಹಾರಿ ಹೋಗಿವೆ. ಕೆಲವು ಹತ್ತಿರದಲ್ಲೇ ಬಿದ್ದಿದ್ದರೆ ಇನ್ನೂ ಕೆಲವು ದೂರದವರೆಗೆ ಹಾರಿವೆ. ಅದೃಷ್ಟವಶಾತ್ ಇದು ರವಿವಾರ ಸಂಭವಿಸಿರುವುದರಿಂದ ಮಕ್ಕಳು ಬಚಾವಾಗಿದ್ದಾರೆ.

ಶಾಲೆಗಳ ನಿರ್ಮಾಣಕ್ಕಾಗಿ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತದೆ. ಮಕ್ಕಳು ವಿದ್ಯಾರ್ಜನೆಗೆ ಶಾಲಾಮಂದಿರಗಳಿಗೆ ಬರುವಾಗ ಅವರಿಗೆ ಎಲ್ಲ ರೀತಿಯ ಸುರಕ್ಷತೆಯನ್ನು ಕಲ್ಪಿಸಬೇಕಾಗುತ್ತದೆ. ಅದು ಶಾಲಾ ಅಭಿವೃದ್ಧಿ ಸಮಿತಿ, ಸಂಬಂಧಪಟ್ಟ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆ ಜವಾಬ್ದಾರಿಯಾಗಿರುತ್ತದೆ ಅಂತ ನಾವೆಲ್ಲ ಭಾವಿಸಿದ್ದೇವೆ. ಅದರೆ ಈ ಶಾಲೆಗಳ ಸ್ಥಿತಿ ನೋಡಿದರೆ ಆ ಭಾವನೆ ಹೊರಟು ಹೋಗುತ್ತದೆ.

ಅಥಣಿಯನ್ನು ಜಿಲ್ಲಾ ಕೇಂದ್ರದ ದರ್ಜೆಗೇರಿಸಲು ಹೋರಾಟ ನಡೆಯುತ್ತಿದೆ. ಆದರೆ ಜಿಲ್ಲೆಯಲ್ಲಿ ಶಾಲೆಗಳ ಸ್ಥಿತಿ ಹೀಗಿದೆ. ಇಲ್ಲಿನ ಜನಪ್ರತಿನಿಧಿಗಳು ಮೂಲಭೂತ ಅವಶ್ಯಕತೆಗಳ ಬಗ್ಗೆ ಯೋಚಿಸಲು ಇದು ಸಕಾಲ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.