ದಿಟ್ಟ ಹೋರಾಟ… ಸೋಲುವ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಿದ ವೆಸ್ಟ್ ಇಂಡೀಸ್..!
New Zealand vs West Indies, 1st Test: ದ್ವಿತೀಯ ಇನಿಂಗ್ಸ್ ಶುರು ಮಾಡಿದ ನ್ಯೂಝಿಲೆಂಡ್ ಪರ ರಚಿನ್ ರವೀಂದ್ರ (176) ಹಾಗೂ ಟಾಮ್ ಲಾಥಮ್ (145) ಶತಕ ಸಿಡಿಸಿದರು. ಈ ಶತಕಗಳ ನೆರವಿನೊಂದಿಗೆ ನ್ಯೂಝಿಲೆಂಡ್ ಬರೋಬ್ಬರಿ 466 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಈ ಮೂಲಕ ಕೊನೆಯ ಎರಡು ದಿನದಾಟಗಳಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ 531 ರನ್ಗಳ ಗುರಿ ನೀಡಲಾಯಿತು.
ನ್ಯೂಝಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಅದು ಕೂಡ ವಿಂಡೀಸ್ ಪಡೆಯ ದಿಟ್ಟ ಹೋರಾಟದೊಂದಿಗೆ ಎಂಬುದು ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ರೋಸ್ಟನ್ ಚೇಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ 231 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ವೆಸ್ಟ್ ಇಂಡೀಸ್ ತಂಡವು ಕೇವಲ 167 ರನ್ಗಳಿಸಿ ಆಲೌಟ್ ಆಯಿತು.
ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಶುರು ಮಾಡಿದ ನ್ಯೂಝಿಲೆಂಡ್ ಪರ ರಚಿನ್ ರವೀಂದ್ರ (176) ಹಾಗೂ ಟಾಮ್ ಲಾಥಮ್ (145) ಶತಕ ಸಿಡಿಸಿದರು. ಈ ಶತಕಗಳ ನೆರವಿನೊಂದಿಗೆ ನ್ಯೂಝಿಲೆಂಡ್ ಬರೋಬ್ಬರಿ 466 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಈ ಮೂಲಕ ಕೊನೆಯ ಎರಡು ದಿನದಾಟಗಳಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ 531 ರನ್ಗಳ ಗುರಿ ನೀಡಲಾಯಿತು.
ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 72 ರನ್ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್ಗಳು ಪೆವಿಲಿಯನ್ಗೆ ಮರಳಿದ್ದರು. ಈ ಹಂತದಲ್ಲಿ ಕಣಕ್ಕಿಳಿದ ಶಾಯ್ ಹೋಪ್ 140 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.
ಇದಾಗ್ಯೂ ವೆಸ್ಟ್ ಇಂಡೀಸ್ ತಂಡದ ಸ್ಕೋರ್ 277 ರನ್ ಆಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಇತ್ತ ಸೋಲಿನತ್ತ ಮುಖ ಮಾಡಿದ ವಿಂಡೀಸ್ ಪಡೆಗೆ ಜಸ್ಟಿನ್ ಗ್ರೀವ್ಸ್ ಹಾಗೂ ಕೆಮರ್ ರೋಚ್ ಆಸೆಯಾಗಿ ನಿಂತರು. ಅದು ಕೂಡ ಬರೋಬ್ಬರಿ 180 ರನ್ಗಳ ಜೊತೆಯಾಟದೊಂದಿಗೆ.
ಇದರ ನಡುವೆ ಜಸ್ಟಿನ್ ಗ್ರೀವ್ಸ್ ಅಜೇಯ 202 ರನ್ಗಳಿಸಿದರೆ, ಕೆಮರ್ ರೋಚ್ ಅಜೇಯ 58 ರನ್ ಬಾರಿಸಿದರು. ಈ ಮೂಲಕ ಐದನೇ ದಿನದಾಟದಲ್ಲಿ ಸಂಪೂರ್ಣ ಬ್ಯಾಟಿಂಗ್ ಮಾಡುವ ಮೂಲಕ ಸೋಲಿಂದ ವೆಸ್ಟ್ ಇಂಡೀಸ್ ತಂಡವನ್ನು ಪಾರು ಮಾಡಿ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸುವಲ್ಲಿ ಯಶಸ್ವಿಯಾದರು.

