13 ಭರ್ಜರಿ ಸಿಕ್ಸ್​… 29 ಎಸೆತಗಳಲ್ಲಿ ವಿಸ್ಫೋಟಕ ಶತಕ

Updated on: Oct 09, 2025 | 7:53 AM

Jake Fraser-McGurk 29 Balls Century: 2023 ರಲ್ಲಿ ಸಿಡಿದ ಈ ವಿಸ್ಫೋಟಕ ವಿಶ್ವ ದಾಖಲೆಯ ಸೆಂಚುರಿಗೆ ಇದೀಗ 2 ವರ್ಷಗಳು ತುಂಬಿವೆ. ಈ ದಾಖಲೆಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಎಂಟ್ರಿ ಕೊಟ್ಟಿದ್ದ ಜೇಕ್​ ಫ್ರೇಸರ್ ಮೆಕ್​ಗುರ್ಕ್ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ್ದು ಯಾರು? ಎಂಬ ಪ್ರಶ್ನೆಗೆ ನಿಮ್ಮ ಉತ್ತರ ಎಬಿ ಡಿವಿಲಿಯರ್ಸ್ ಎಂದಾಗಿದ್ದರೆ, ಅದು ತಪ್ಪು. ಈ ವಿಶ್ವ ದಾಖಲೆಯ ಶತಕದ ದಾಖಲೆಯನ್ನು ಮುರಿದು 2 ವರ್ಷಗಳೇ ಕಳೆದಿವೆ. ಅಂದರೆ ಎಬಿಡಿ ಬರೆದಿದ್ದ 31 ಎಸೆತಗಳ ವಿಸ್ಫೋಟಕ ಸೆಂಚುರಿಯನ್ನು 2023 ರಲ್ಲಿ ಆಸ್ಟ್ರೇಲಿಯಾದ ಜೇಕ್ ಫ್ರೇಸರ್​ ಮೆಕ್​ಗುರ್ಕ್​ ಅಳಿಸಿ ಹಾಕಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆದ ಮಾರ್ಷ್ ಕಪ್ ಟೂರ್ನಿಯಲ್ಲಿ ಜೇಕ್​ ಫ್ರೇಸರ್ ಮೆಕ್​ಗುರ್ಕ್​ ಸಿಡಿಲಬ್ಬದರ ಸೆಂಚುರಿ ಸಿಡಿಸಿದ್ದರು. ಅಡಿಲೇಡ್​ನಲ್ಲಿ ನಡೆದ ಈ ಪಂದ್ಯದಲ್ಲಿ ಸೌತ್ ಆಸ್ಟ್ರೇಲಿಯಾ ಹಾಗೂ ಟಾಸ್ಮೇನಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟಾಸ್ಮೇನಿಯಾ ತಂಡವು 50 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 435 ರನ್​ಗಳು.

ಈ ಗುರಿಯನ್ನು ಬೆನ್ನತ್ತಿದ ಸೌತ್ ಆಸ್ಟ್ರೇಲಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಜೇಕ್ ಫ್ರೇಸರ್ ಮೆಕ್​ಗುರ್ಕ್ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್​ನಿಂದಲೇ ಸಿಕ್ಸ್​-ಫೋರ್​ಗಳ ಸುರಿಮಳೆಗೈದ ಮೆಕ್​ಗುರ್ಕ್​ ಕೇವಲ 29 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಸೆಂಚುರಿ ಸಿಡಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಅಲ್ಲದೆ ಈ ಪಂದ್ಯದಲ್ಲಿ ಕೇವಲ 38 ಎಸೆತಗಳನ್ನು ಎದುರಿಸಿದ ಜೇಕ್ ಫ್ರೇಸರ್ 13 ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 125 ರನ್​ ಚಚ್ಚಿದರು. ಈ ಶರವೇಗದ ಸೆಂಚುರಿಯ ಹೊರತಾಗಿಯೂ ಈ ಪಂದ್ಯದಲ್ಲಿ ಸೌತ್ ಆಸ್ಟ್ರೇಲಿಯಾ ತಂಡ 46.4 ಓವರ್​ಗಳಲ್ಲಿ 398 ರನ್​ಗಳಿಸಿ 37 ರನ್​ಗಳಿಂದ ಸೋಲೊಪ್ಪಿಕೊಂಡಿತು.

2023 ರಲ್ಲಿ ಸಿಡಿದ ಈ ವಿಸ್ಫೋಟಕ ವಿಶ್ವ ದಾಖಲೆಯ ಸೆಂಚುರಿಗೆ ಇದೀಗ 2 ವರ್ಷಗಳು ತುಂಬಿವೆ. ಈ ದಾಖಲೆಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಎಂಟ್ರಿ ಕೊಟ್ಟಿದ್ದ ಜೇಕ್​ ಫ್ರೇಸರ್ ಮೆಕ್​ಗುರ್ಕ್ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.